ಬೆಂಗಳೂರು/ಮೈಸೂರು:ಹಿರಿಯ ಸಾಹಿತಿ, ಸಂಶೋಧಕ, ಕನ್ನಡಪರ ಅಗ್ರಗಣ್ಯ ಹೋರಾಟಗಾರ ಡಾ. ಎಂ.ಚಿದಾನಂದಮೂರ್ತಿ ಅವರ ನಿಧನಕ್ಕೆ ರಾಜಕೀಯ ಗಣ್ಯರಾದ ಸಚಿವ ಸುರೇಶ್ ಕುಮಾರ್, ಡಿಸಿಎಂ ಡಾ. ಸಿ. ಅಶ್ವತ್ಥ್ ನಾರಾಯಣ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ.
ಚಿದಾನಂದಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ ರಾಜಕೀಯ ಗಣ್ಯರು ಕನ್ನಡ ನಾಡಿನ ಜಲ, ನೆಲ ಮತ್ತು ಗಡಿಯ ವಿಚಾರ ಬಂದಾಗ ದೊಡ್ಡ ಧ್ವನಿ ಎತ್ತುತ್ತಿದ್ದ ಚಿದಾನಂದಮೂರ್ತಿ ನಮ್ಮ ಮಧ್ಯೆ ಇಂದು ಇಲ್ಲ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಚಿದಾನಂದಮೂರ್ತಿ ನಿಧನಕ್ಕೆ ಸಚಿವ ಸುರೇಶ್ ಕುಮಾರ್ ಮೈಸೂರಿನಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸಂತಾಪ ಸೂಚಿಸಿದ್ದಾರೆ.
ನಮ್ಮ ನಾಡಿಗೆ ಸಮಗ್ರವಾದ ವಿಚಾರಗಳನ್ನು ಹಂಚಿ ಸಾರ್ಥಕ ಬದುಕು ಹಾಗೂ ಸಮಾಜದ ಹಿತಕ್ಕಾಗಿ ಬದುಕಿದಂತ ಮಹಾನ್ ವ್ಯಕ್ತಿ ಅರ್ಥಪೂರ್ಣ ಬದುಕನ್ನು ಮುಗಿಸಿ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕೊಡಲಿ ಎಂದು ಚಿದಾನಂದಮೂರ್ತಿಯವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ. ಸಿ.ಅಶ್ವತ್ಥ್ ನಾರಾಯಣ್ ಸಂತಾಪ ಸೂಚಿಸಿದ್ದಾರೆ.
ಇತಿಹಾಸ ತಜ್ಞ ಹಾಗೂ ಸಂಶೋಧಕರಾಗಿರುವ ಡಾ. ಎಂ.ಚಿದಾನಂದಮೂರ್ತಿಯವರ ಅಗಲಿಕೆ ಅಪಾರವಾದ ನೋವುಂಟು ಮಾಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಡು ನುಡಿಗಾಗಿ ಶ್ರಮಿಸಿದ ಚಿದಾನಂದಮೂರ್ತಿಯವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಅಮೂಲ್ಯವಾದ ರತ್ನವೊಂದನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ. ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.