ಬೆಂಗಳೂರು: ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ಪಾವತಿಸಲು ನೀತಿಯೊಂದನ್ನು ರೂಪಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಜೈಲಿನಲ್ಲಿ ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ 2017ರ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠಕ್ಕೆ ಸರ್ಕಾರ ಪರ ವಕೀಲರು ಮಾಹಿತಿ ನೀಡಿದರು.
ಸರ್ಕಾರದ ಮಾಹಿತಿ ದಾಖಲಿಸಿಕೊಂಡ ನ್ಯಾಯಪೀಠ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವು ಸರ್ಕಾರದ ಆದೇಶದೊಂದಿಗೆ ಈಡೇರಿಸಿದ್ದು, ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
ಸರ್ಕಾರದ ನೀತಿಯಲ್ಲಿ ಎರಡು ವಿಭಾಗಗಳಿವೆ. ಅಸಹಜವಾಗಿ ಸಾವನ್ನಪ್ಪಿದ ಕೈದಿಯ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡುವುದು ಒಂದಾದರೆ, ಕೈದಿಗಳ ನಡುವಿನ ಒಡೆದಾಟದಲ್ಲಿ ಕೈದಿ ಸಾವನ್ನಪ್ಪಿದರೆ ಆತನ ಕುಟುಂಬದ ಅಥವಾ ಅವಲಂಬಿತರಿಗೆ 7.50 ಲಕ್ಷ ರೂಪಾಯಿ ಪಾವತಿಸಲಾಗುತ್ತದೆ. ಆತ್ಮಹತ್ಯೆ ಸೇರಿದಂತೆ ಅಸಹಜ ಸಾವು ಸಂಭವಿಸಿದರೆ ಆ ಕೈದಿಯ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಜೈಲಿನಲ್ಲಿ ಅಸಹಜವಾಗಿ ಸಾವನ್ನಪ್ಪದವರಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಶಿಫಾರಸು ಮಾಡಿದವರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹಿಂದೆ ವಾದಿಸಿತ್ತು. ಈ ವಾದದಿಂದ ಅಂತರ ಕಾಯ್ದುಕೊಂಡಿದ್ದ ನ್ಯಾಯಾಲಯವು ತಾನು ನಿಗದಿಪಡಿಸಿದ ಹಣವವನ್ನು ಪರಿಹಾರದ ರೂಪದಲ್ಲಿ ಪಾವತಿಸಬೇಕೇ ವಿನಾ ಮಾನವ ಹಕ್ಕುಗಳ ಆಯೋಗ ಶಿಫಾರಸು ಮಾಡಿದಷ್ಟನ್ನು ಅಲ್ಲ ಎಂದಿತ್ತು. ಈಗ ರಾಜ್ಯ ಸರ್ಕಾರ ನೀತಿ ರೂಪಿಸಿರುವುದು ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಇದನ್ನೂ ಓದಿ:ಗ್ರಂಥಾಲಯ, ಕ್ರೀಡಾಂಗಣ ಇಲ್ಲದಿದ್ದರೂ ಮೇಲ್ದರ್ಜೆಗೆ ಮನವಿ; ಖಾಸಗಿ ಶಾಲಾ ಆಡಳಿತ ಮಂಡಳಿ ನಡೆಗೆ ಹೈಕೋರ್ಟ್ ಗರಂ