ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಕವಾಯತು ನಡೆಯಲಿರುವ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಹಿನ್ನೆಲೆ ಕೆಎಸ್‌ಆರ್‌ಪಿ ಹಾಗೂ ಸಿಎಆರ್ ಸಹಿತ 38 ತುಕಡಿಗಳು ಭದ್ರತೆಗೆ ನಿಯೋಜನೆಗೊಂಡಿದ್ದು, 1,350ಕ್ಕೂ ಹೆಚ್ಚು ಪೊಲೀಸರು ಮೈದಾನದ ಸುತ್ತ ಬಿಗಿ ಭದ್ರತೆ ವಹಿಸಿದ್ದಾರೆ.
ಅಲ್ಲದೇ ಮೈದಾನದ ಸುತ್ತಲೂ 100 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಕಣ್ಗಾವಲಿದ್ದು, ಪಾಸ್ ಪಡೆದು ಒಳಗಡೆ ಹೋಗುವವರಿಗೆ ಎರಡು ಕಡೆಗಳಲ್ಲಿ ತಪಾಸಣೆ ಇರಲಿದೆ.ಮುಂಜಾಗ್ರತಾ ಕ್ರಮವಾಗಿ ಆ್ಯಂಬುಲೆನ್ಸ್, ಅಗ್ನಿಶಾಮಕ ದಳ, ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜನೆಯಾಗಿವೆ. ಮೈದಾನ ಪ್ರವೇಶಿಸುವವರು ಯಾವುದೇ ಚೂಪಾದ ವಸ್ತುಗಳು, ಅನುಮಾನಾಸ್ಪದ ವಸ್ತುಗಳನ್ನು ಕೊಂಡೊಯ್ಯದಂತೆ ನಿರ್ಬಂಧ ವಿಧಿಸಲಾಗಿದೆ.
ಸುತ್ತಮುತ್ತ ಸಂಚಾರ ನಿರ್ಬಂಧ: ಮೈದಾನದ ಸುತ್ತಲೂ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೂ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧವಿರಲಿದೆ. ಕಬ್ಬನ್ ರಸ್ತೆ, ಬಿ ಆರ್ ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರ ನಿರ್ಬಂಧವಿರಲಿದ್ದು, ಬದಲಿಯಾಗಿ ಅನಿಲ್ ಕುಂಬ್ಳೆ ಸರ್ಕಲ್ - ನೇರವಾಗಿ ಸೆಂಟ್ರಲ್ ಸ್ಟ್ರೀಟ್ - ಬಲಕ್ಕೆ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆ - ಆಲಿ ಸರ್ಕಲ್ - ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ಬಲಕ್ಕೆ ತಿರುವು - ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.