ಪೊಲೀಸ್ ಇಲಾಖೆಯಲ್ಲಿ ಮಿತಿಮೀರಿದ ಲಂಚಾವತಾರ : ಎಂಟು ತಿಂಗಳಲ್ಲಿ ಸಸ್ಪೆಂಡ್ ಆದ ಪೊಲೀಸರೆಷ್ಟು?
ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿಯೇ ಹೆಚ್ಚೆಚ್ಚು ಲಂಚ ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾ ಲಾಕ್ಡೌನ್ ವೇಳೆ ಸಹ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಕರಣಗಳು ಬಹಿರಂಗಗೊಂಡಿವೆ..
ಪೊಲೀಸ್ ಇಲಾಖೆಯಲ್ಲಿ ಮಿತಿಮೀರಿದ ಲಂಚಾವತಾರ
By
Published : Aug 22, 2021, 5:42 PM IST
ಬೆಂಗಳೂರು: ಅನ್ಯಾಯ ಹಾಗೂ ದೌರ್ಜನ್ಯಕ್ಕೊಳಗಾದ ಅಮಾಯಕರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ದುರಾಸೆಗೆ ಜೋತು ಬಿದ್ದು ಜನರಿಂದ ಹಣ ವಸೂಲಿ ಮಾಡಿ ಸಿಕ್ಕಿ ಬೀಳುತ್ತಿರುವುದು ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ.
ಅಧಿಕಾರ, ದುರಾಸೆ, ರಾಜಕೀಯ ಒತ್ತಡ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪೊಲೀಸ್ ಇಲಾಖೆಯಲ್ಲಿಯೇ ಹೆಚ್ಚೆಚ್ಚು ಲಂಚ ಪ್ರಕರಣ ವರದಿಯಾಗುತ್ತಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ ಭ್ರಷ್ಟಾಚಾರ ಆರೋಪದಲ್ಲಿ ಹೆಚ್ಚು ಪೊಲೀಸರು ಅಮಾನತುಗೊಂಡಿದ್ದಾರೆ. ಕಳೆದ 8 ತಿಂಗಳಲ್ಲಿ 22 ಪೊಲೀಸರು ಸಸ್ಪೆಂಡ್ ಆಗಿ, ಪೊಲೀಸ್ ಇಲಾಖಾ ತನಿಖೆ ಎದುರಿಸುತ್ತಿದ್ದಾರೆ.
ಕಾರ್ಯಕಾರಿ ಹುದ್ದೆಗಳಿಗೆ ಬರುವ ಎಸಿಪಿ, ಇನ್ಸ್‌ಪೆಕ್ಟರ್, ಕೆಳಹಂತದ ಸಿಬ್ಬಂದಿಯು ಆಯಾ ಪೊಲೀಸ್ ಠಾಣೆಗಳಿಗೆ ಪೋಸ್ಟಿಂಗ್ ಹಾಕಿಸಿಕೊಳ್ಳುವ ಮುನ್ನ ಆಯಾ ಕ್ಷೇತ್ರದ ಶಾಸಕರ ಕೃಪಾಕಟಾಕ್ಷದ ಜೊತೆಗೆ ವಿವಿಧ ಮಾರ್ಗಗಳಲ್ಲಿ ಅಕ್ರಮ ಹಣ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಲಾಕ್ಡೌನ್ ವೇಳೆ ಸಹ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಕರಣಗಳು ಬಹಿರಂಗಗೊಂಡಿರುವುದು ವಿಪರ್ಯಾಸ.
2020 ಏ.25ರಂದು ಎಸಿಪಿ ವಾಸು ಸಸ್ಪೆಂಡ್ :ಕಳೆದ ವರ್ಷ ಏಪ್ರಿಲ್ 25ರಂದು ಲಾಕ್ಡೌನ್ ವೇಳೆ ಸರ್ಕಾರಿ ವಾಹನದಲ್ಲಿ ಮದ್ಯದ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ತಡೆದ ಎಲೆಕ್ಟ್ರಾನಿಕ್ ಸಿಟಿ ಎಸಿಪಿಯಾಗಿದ್ದ ಆರ್.ವಾಸು ತಂಡವು, 50 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಡಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅಮಾನತು ಮಾಡಿದ್ದರು. ವಾಹನ ಬಿಡದಿದ್ದಕ್ಕೆ ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.
2020 ಮೇ 8ರಂದು ಸಿಸಿಬಿ ಎಸಿಪಿ ಅಮಾನತು :ಕಳೆದ ವರ್ಷ ಲಾಕ್ಡೌನ್ ವೇಳೆ ಸಿಗರೇಟ್ ಕಂಪೆನಿಗಳಿಗೆ ಮಾರಾಟಕ್ಕೆ ಅನುವು ಮಾಡಿಕೊಡಲು ಆಗಿನ ಎಸಿಪಿ ಆಗಿದ್ದ ಪ್ರಭುಶಂಕರ್, ಇನ್ಸ್ಪೆಕ್ಟರ್ಗಳಾದ ಅಜಯ್ ಹಾಗೂ ನಿರಂಜನ್ ಕುಮಾರ್ ಅವರನ್ನು ಕೆಲ ಕಂಪನಿಗಳಿಂದ 1.12 ಕೋಟಿ ಲಂಚ ಪಡೆದ ಆರೋಪದಡಿ, ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅಮಾನತು ಮಾಡಿ ಆದೇಶಿಸಿದ್ದರು. ಬಳಿಕ ಪ್ರಭುಶಂಕರ್ ಮೇಲೆ ದಾಳಿ ಮಾಡಿ 25 ಲಕ್ಷ ರೂಪಾಯಿ ಜಪ್ತಿ ಮಾಡಿಕೊಳ್ಳಲಾಗಿತ್ತು.
ಡ್ರಗ್ಸ್ ಆರೋಪಿಗಳಿಗೆ ಸಹಾಯ ಮಾಡಿ ಬೆಲೆತೆತ್ತ ಎಸಿಪಿ :ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಬಂಧಿತ ಆರೋಪಿಗಳಿಗೆ ತನಿಖಾ ಮಾಹಿತಿ ಸೋರಿಕೆ, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಮಾಹಿತಿ ಸಹಕಾರ ಜೊತೆಗೆ ಆರೋಪಿಗಳಿಗೆ ಮೊಬೈಲ್ ನೀಡಿದ ಆರೋಪದಡಿ ಸಿಸಿಬಿ ಎಸಿಪಿ ಮುದವಿ ಹಾಗೂ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ಎಂಬುವರನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೆ.23ರಂದು ಸಸ್ಪೆಂಡ್ ಮಾಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ನಡೆಯುತ್ತಿರುವ ಪ್ರತಿಯೊಂದು ತನಿಖಾ ಮಾಹಿತಿಯನ್ನು ಬಂಧಿತ ಆರೋಪಿಗಳಿಗೆ ಹಾಗೂ ತಲೆಮರೆಸಿಕೊಂಡಿದ್ದ ದಂಧೆಕೋರರಿಗೆ ಸೋರಿಕೆ ಮಾಡಿದ್ದರು.
ಸಂಜಯನಗರ ಇನ್ಸ್‌ಪೆಕ್ಟರ್ ಕಾತ್ಯಾಯಿನಿ ಅರೆಸ್ಟ್ :ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ಪ್ರಕರಣ ಸಂಬಂಧ ಅನಗತ್ಯವಾಗಿ ಠಾಣೆಗೆ ಕರೆಸಿ ಹಲ್ಲೆ ಮಾಡಿದ ಆರೋಪ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಕಾತ್ಯಾಯಿನಿ, ಕಾನ್ಸ್ಪೇಬಲ್ಗಳಾದ ಮಂಜುನಾಥ್, ಪಾಂಡುರಂಗ ಸೇರಿ ಮೂವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದರು.
ಖಾಸಗಿ ಆಸ್ಪತ್ರೆ ವೈದ್ಯ ನಾಗರಾಜ್ ಎಂಬುವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನೆಪದಲ್ಲಿ ಅನಗತ್ಯವಾಗಿ ಠಾಣೆಯಲ್ಲಿ ಇರಿಸಿ ಲಾಠಿಯಿಂದ ಸಂಜಯನಗರ ಪೊಲೀಸರು ಥಳಿಸಿದ್ದರು. ಈ ವೇಳೆ ಹಣಕ್ಕೆ ಡಿಮ್ಯಾಂಡ್ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿ ಎಂಬಂತೆ ಹಲ್ಲೆ ಮಾಡಿ ಹಣ ಕೇಳಿದ್ದರು ಎಂದು ಆಪಾದಿಸಿದ ವಿಡಿಯೋ ಹಿರಿಯ ಅಧಿಕಾರಿಗಳ ಗಮನಕ್ಕೂ ಹೋಗಿತ್ತು.
ಆರೋಪ ಕೇಳಿ ಬಂದ ಹಿನ್ನೆಲೆ ಇನ್ಸ್‌ಪೆಕ್ಟರ್ ಕಾತ್ಯಾಯಿನಿ ಸೇರಿ ಮೂವರನ್ನು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದ್ದರು. ಆರೋಪ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ ವರದಿ ಕಮಿಷನರ್ ಕೈ ಸೇರುತ್ತಿದ್ದಂತೆ ಇದೇ ವರ್ಷ ಮೇ 31ರಂದು ಅಮಾನತು ಮಾಡಿ ಇಲಾಖಾ ತನಿಖೆ ನಡೆಸಲು ಆಯುಕ್ತರು ಆದೇಶಿಸಿದ್ದರು.
ಸುಳ್ಳು ಕೇಸ್ ಆರೋಪ ಪಿಐ, ಪಿಎಸ್ಐ ಸಸ್ಪೆಂಡ್ :ಬೀದಿ ಬದಿ ವ್ಯಾಪಾರಿಯನ್ನು ಠಾಣೆಗೆ ಕರೆದುಕೊಂಡು ಬಲವಂತವಾಗಿ ಧೂಮಪಾನ ಮಾಡಿಸಿ ಗಾಂಜಾ ಪ್ರಕರಣದಡಿ ಸುಳ್ಳು ಕೇಸ್ ದಾಖಲಿಸಿದ ಆರ್ಎಂಸಿ ಯಾರ್ಡ್ ಇನ್ಸ್‌ಪೆಕ್ಟರ್ ಪಾರ್ವತಮ್ಮ, ಸಬ್ ಇನ್ಸ್‌ಪೆಕ್ಟರ್ ಆಂಜಿನಪ್ಪ ಹಾಗೂ ಕಾನ್ಸ್ಟೇಬಲ್ ಉಮೇಶ್ ಎಂಬುವರನ್ನು ಜು.21ರಂದು ಅಮಾನತು ಮಾಡಲಾಗಿತ್ತು. ವ್ಯಾಪಾರಿ ಶಿವರಾಜ್, ಪೊಲೀಸರ ವರ್ತನೆಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಅದೇ ರೀತಿಯ ಪ್ರಕರಣದಲ್ಲಿ ಬಂಧಿಸದಿರಲು ವ್ಯಕ್ತಿಯೋರ್ವರಿಂದ 5 ಲಕ್ಷ ಪಡೆದ ಆರೋಪದಡಿ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಜೆ ಎಂ ರೇಣುಕಾ, ಸಬ್ ಇನ್ಸ್‌ಪೆಕ್ಟರ್ ನವೀನ್ ಕುಮಾರ್, ಎಎಸ್ಐ ಗಣೇಶ್, ಕಾನ್ಸ್ಟೇಬಲ್ ಹೇಮಂತ್ ಕುಮಾರ್ ಕಳೆದ ಜುಲೈ 29ರಂದು ಸಸ್ಪೆಂಡ್ ಆಗಿದ್ದರು. ಆರೋಪಿತರ ವಿರುದ್ಧ ಎಸಿಬಿ ದಾಳಿ ನಡೆಸಿದಾಗ ಲಂಚಾವತಾರ ಬೆಳಕಿಗೆ ಬಂದಿತ್ತು. ಸದ್ಯ ಈ ಪ್ರಕರಣವನ್ನು ಎಸಿಬಿ ತನಿಖೆ ನಡೆಸುತ್ತಿದೆ.