ಬೆಂಗಳೂರು: ಸಿಲಿಕಾನ್ ಸಿಟಿ, ಐಟಿ-ಬಿಟಿ ಸಿಟಿ, ಡೈನಾಮಿಕ್ ಸಿಟಿ ಹೀಗೆ.. ವಿವಿಧ ಬಿರುದಾವಳಿಗಳಿಂದ ಹೆಸರಾಗಿರುವ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಅಪರಾಧ ಕೃತ್ಯಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಸುಮಾರು 1.32 ಕೋಟಿ ಜನಸಂಖ್ಯೆ ಹೊಂದಿರುವ ಈ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವುದೇ ಪೊಲೀಸರಿಗೊಂದು ಸವಾಲು. ದೇಶದ ಕಾಸ್ಮೋಪಾಲಿಟನ್ ಸಿಟಿಗಳಿಗೆ ಹೋಲಿಸಿದರೆ ರಾಜ್ಯ ರಾಜಧಾನಿಯಲ್ಲಿ ಪೊಲೀಸರ ಸಂಖ್ಯೆ ತೀರಾ ಕಡಿಮೆ. ಆದರೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರೇನೂ ಹಿಂದೆ ಬಿದ್ದಿಲ್ಲ.
ದೆಹಲಿ, ಕೋಲ್ಕತ್ತಾ ಹಾಗು ಮುಂಬೈ ಸೇರಿದಂತೆ ದೇಶದ ಬೇರೆ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಲೀಸರಿದ್ದಾರೆ. ನಗರದಲ್ಲಿ ಸಿವಿಲ್ ಹಾಗೂ ರಿಸರ್ವ್ ಸೇರಿದಂತೆ ಒಟ್ಟು 24,947 ಮಂದಿ ಪೊಲೀಸರಿದ್ದಾರೆ. ಕೋಲ್ಕತ್ತಾದಲ್ಲಿ 46 ಲಕ್ಷ ಜನಸಂಖ್ಯೆಗೆ 34,555, ದೆಹಲಿಯಲ್ಲಿ 2.09 ಕೋಟಿ ಜನರಿಗೆ 94,311, ಮುಂಬೈನಲ್ಲಿ 1.37 ಕೋಟಿ ಮಂದಿಗೆ 60,296 ಹಾಗೂ ಚೆನ್ನೈನಲ್ಲಿ 71 ಲಕ್ಷ ಜನಸಂಖ್ಯೆಗೆ 25,838 ಪೊಲೀಸರಿದ್ದಾರೆ. ಬೆಂಗಳೂರಿನ 1 ಲಕ್ಷ ಜನರಿಗೆ ಕೇವಲ 189 ಪೊಲೀಸರಿದ್ದಾರೆ. ಕೋಲ್ಕತ್ತಾದಲ್ಲಿ 751 ದೆಹಲಿಯಲ್ಲಿ 451 ಹಾಗೂ ಮುಂಬೈನಲ್ಲಿ 440 ಮಂದಿ ಪೊಲೀಸರಿದ್ದಾರೆ.
ಪ್ರತಿವರ್ಷ ಸಾವಿರಾರು ಪ್ರಕರಣಗಳು ದಾಖಲು: ನಗರದಲ್ಲಿ ಪ್ರತಿ ಚದರ ಕಿಲೋಮೀಟರ್ಗೆ ಕೇವಲ 34 ಮಂದಿಯಷ್ಟೇ ಆರಕ್ಷಕರಿದ್ದಾರೆ. ಕೋಟ್ಯಂತರ ಜನರಿರುವ ನಗರದಲ್ಲಿ ಪ್ರತಿದಿನ ಹತ್ತಾರು ಅಪರಾಧ ಪ್ರಕರಣ ದಾಖಲಾಗುತ್ತಿವೆ. ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಅಪರಾಧ ಸೇರಿದಂತೆ ಪ್ರತಿವರ್ಷ ಸಾವಿರಾರು ಪ್ರಕರಣಗಳು ನಡೆಯುತ್ತವೆ. ಆರೋಪಿಗಳ ಬಂಧನದ ಜೊತೆಗೆ ಶಿಕ್ಷೆ ಕೊಡಿಸುವಲ್ಲಿ ನಗರ ಪೊಲೀಸರು ಮುಂದಿದ್ದಾರೆ. ಕಾನೂನು ಸುವ್ಯವಸ್ಥೆ ಸಂಬಂಧ ದಾಖಲಾಗಿದ್ದ ಪ್ರಕರಣಗಳ ಪೈಕಿ ಕಳೆದ ವರ್ಷ ಶೇ 32ರಷ್ಟು ಆರೋಪಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ. 2021ರಲ್ಲಿ ಶೇ 59ರಷ್ಟು ಶಿಕ್ಷೆಯ ಪ್ರಮಾಣವಿತ್ತು.
ನುರಿತ ಪೊಲೀಸ್ ಸಿಬ್ಬಂದಿ ಕೊರತೆ :ಇದೇ ವರ್ಷ ಮುಂಬೈನಲ್ಲಿ ಶೇ 48, ಕೋಲ್ಕತ್ತಾ ಶೇ 51 ಹಾಗೂ ಚೆನ್ನೈನಲ್ಲಿ ಶೇ 68ರಷ್ಟಿದೆ. ನಗರದಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಬೇಕಿದೆ. ಸೂಕ್ತ ಹೈಟೆಕ್ ಉಪಕರಣಗಳ ಜೊತೆ ನುರಿತ ಪೊಲೀಸ್ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಡ್ರಗ್ಸ್ ಸೇರಿದಂತೆ ಇನ್ನಿತರ ಅಪರಾಧಗಳನ್ನು ತಹಬದಿಗೆ ಹಾಕಲು ಭವಿಷ್ಯದ ದೃಷ್ಠಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ರಾಜ್ಯ ಸರ್ಕಾರ ನೇಮಕಾತಿ ಮಾಡಿಕೊಳ್ಳಬೇಕಿದೆ. ನಗರದ ಸಿವಿಲ್ ಪೊಲೀಸ್ ವಿಭಾಗಕ್ಕೆ ಮಂಜೂರಾಗಿರುವ 63,94 ಹುದ್ದೆಗಳ ಪೈಕಿ 5,833 ಪೊಲೀಸರಿದ್ದು, 561 ಮಂದಿ ಸಿಬ್ಬಂದಿ ಕೊರತೆ ಇದೆ.