ಬೆಂಗಳೂರು:ಪೊಲೀಸರು ಇನ್ನೂ ಹೆಚ್ಚು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವಟ್ ಹಾಲ್ನಲ್ಲಿ ಇಂದು ಆಯೋಜಿಸಿದ್ದ 2017-18ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಪೊಲೀಸರಿಗೆ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಎಂದರೆ ಅತ್ಯಂತ ವಿಶ್ವಾಸಾರ್ಹ ಹಾಗೂ ದಕ್ಷ ಪಡೆ ಎಂದು ಹೆಸರು ಪಡೆದಿವೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ನಕ್ಸಲ್ ಚಟುವಟಿಕೆ ನಿಗ್ರಹ, ಗುಪ್ತ ವಾರ್ತೆ ಸಂಗ್ರಹ, ರಸ್ತೆ ಸಂಚಾರ ಸುರಕ್ಷತೆ ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ವೃತ್ತಿ ನಿಪುಣತೆಯನ್ನು ಪೊಲೀಸರು ಪ್ರದರ್ಶಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪ್ರಯತ್ನಿಸುವ ಸಂಘಟಿತ ಅಪರಾಧಿಗಳು, ಸಮಾಜವಿರೋಧಿ ಶಕ್ತಿಗಳು ಹಾಗೂ ಮತೀಯವಾದಿಗಳನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಎಂದರು.
ಈ ಪದಕ ವಿಜೇತರಿಗಷ್ಟೇ ಅಲ್ಲದೆ ಇತರರಿಗೂ ಮಾದರಿಯಾಗಿದೆ. ಪದಕದ ಜೊತೆ ಹತ್ತು ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ ಆಗಿದೆ ಎಂದು ಹೇಳಿದರು.
ಪೊಲೀಸರ ಮನೋಸ್ಥೈರ್ಯ ಹೆಚ್ಚಿಸಿ ಅವರು ನಿಸ್ವಾರ್ಥ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಪೊಲೀಸ್ ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಯಿ ಮಾತನಾಡಿ, ನಮ್ಮ ಇಲಾಖೆಯಲ್ಲಿ ಹಲವಾರು ಸವಾಲು ಬರುತ್ತವೆ. ಅವುಗಳನ್ನು ನಮ್ಮ ಸಿಬ್ಬಂದಿ ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದರು. ಆಧುನಿಕ ತಂತ್ರ ಬರುತ್ತಿರುವುದರಿಂದ ತಂತ್ರಜ್ಞಾನ ದುರ್ಬಳಕೆ ಸಹ ಆಗುತ್ತಿದೆ. ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಹಲವಾರು ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಎಲ್ಲವನ್ನೂ ನಿಭಾಯಿಸಬೇಕು ಎಂದು ಹೇಳಿದರು.
ಪೊಲೀಸ್ ನೇಮಕಾತಿಯಲ್ಲೂ ಹಲವಾರು ಬದಲಾವಣೆ ತರಬೇಕಿದೆ. 16 ಸಾವಿರ ಪೊಲೀಸ್ ನೇಮಕಾತಿಗೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಈಗಾಗಲೇ ಹಲವಾರು ನೇಮಕಾತಿ ನಡೆಯುತ್ತಿದೆ. ಹೊಸ ಕಟ್ಟಡಗಳು ಸೇರಿದಂತೆ ಹಲವಾರು ಕಟ್ಟಡಗಳು ನವೀಕರಣಗೊಳ್ಳುತ್ತಿವೆ ಎಂದು ತಿಳಿಸಿದರು.
2017ನೇ ಸಾಲಿನ 117 ಮಂದಿ ಪೊಲೀಸರು ಹಾಗೂ 2018ನೇ ಸಾಲಿನ 120 ಮಂದಿ ಒಟ್ಟು 237 ಮಂದಿ ಪೊಲೀಸರಿಗೆ ಸಿಎಂ ಪದಕ ಪ್ರದಾನ ಮಾಡಲಾಯಿತು. ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜಿನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.