ಬೆಂಗಳೂರು: ಚುನಾವಣೆಗೂ ಮುನ್ನ ಅಕ್ರಮ ಸಂಪತ್ತಿನ ಬೇಟೆ ಮುಂದುವರೆದಿದೆ. ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 7 ಕೆ.ಜಿ 999 ಗ್ರಾಂ ಚಿನ್ನ ಹಾಗೂ 46 ಕೆ.ಜಿ 700 ಗ್ರಾಂ ಬೆಳ್ಳಿಯನ್ನ ವಿವೇಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಈಚರ್ ವಾಹನದಲ್ಲಿ ಸಾಗಿಸುತ್ತಿದ್ದಾಗ ವಿವೇಕನಗರ ಪೊಲೀಸ ಪರಿಶೀಲನೆ ವೇಳೆ ಚಿನ್ನಾಭರಣ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಿರುವ ಪೊಲೀಸರು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿಯಾದ ಆಭರಣಗಳ ಮೌಲ್ಯ ಒಟ್ಟು ಐದು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದ್ದು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾವೇರಿಯಲ್ಲಿ 6 ಕೋಟಿ ಮೌಲ್ಯದ ಚಿನ್ನಾಭರಣ ವಶ:ಅಜ್ಜಯ್ಯ ಗುಡಿ ಚೆಕ್ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸರಿ ಸುಮಾರು 6 ಕೋಟಿ 90 ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಿಂದ ಹಾವೇರಿ ಮತ್ತು ದಾವಣಗೆರೆಯ ಚಿನ್ನದ ಅಂಗಡಿಗಳಿಗೆ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 11 ಕೆ.ಜಿಯಷ್ಟು ಚಿನ್ನ, 70 ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನು ಸಾಗಿಸಲಾಗುತ್ತಿತ್ತು.
ಆಭರಣಗಳನ್ನು ಖರೀದಿಸಿರು ಬಿಲ್ಗಳಿದ್ದು ಆದರೇ ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಹಾಗೇ ನಿಖರವಾಗಿ ಈ ಚಿನ್ನಾಭರಣಗಳನ್ನು ಯಾವ ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ದಾಖಲೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಮಿತಿಗೆ ವರ್ಗಾಯಿಸಲಾಗಿದೆ.