ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಬೆಂಗಳೂರು ಪೊಲೀಸರು ಅಗತ್ಯ ಭದ್ರತಾ ಕ್ರಮಗಳನ್ನು ಆರಂಭಿಸಿದ್ದು, ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ "ಈ ಸಮಯದಲ್ಲಿ ಅನಧಿಕೃತವಾಗಿ ಮದ್ಯ ಶೇಖರಣೆ ಹಾಗೂ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಡ್ರಿಂಕ್ ಅಂಡ್ ಡ್ರೈವ್ ವಿರುದ್ಧ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ರಾತ್ರಿ ಒಂದು ಗಂಟೆಯ ವರೆಗೆ ಮಾತ್ರ ಸಂಭ್ರಮಾಚರಣೆಗಳಿಗೆ ಅವಕಾಶ ಇರಲಿದ್ದು, ನಂತರ ಹೋಟೆಲ್, ಬಾರ್, ಪಬ್ ಎಲ್ಲವೂ ಬಂದ್ ಮಾಡಬೇಕು" ಎಂದು ತಿಳಿಸಿದರು.
"ಜನಸಂದಣಿಯಿರುವ ಸ್ಥಳಗಳಲ್ಲಿ ಬಂದೋಬಸ್ತ್ ಪಿಕೆಟಿಂಗ್ ಪಾಯಿಂಟ್ಗಳನ್ನು ಮಾಡಲಾಗಿದೆ. ಸ್ಟಾರ್ ಹೋಟೆಲ್, ಪಬ್, ಕ್ಲಬ್, ರೆಸ್ಟೋರೆಂಟ್ಗಳಿರುವ ಕಡೆಗಳಲ್ಲಿ ಬಂದೋಬಸ್ತ್ ಪಾಯಿಂಟ್, ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಂಡ್ಸ್ಗಳ ನಿರ್ಮಾಣ ಮಾಡಲಾಗಿದೆ. ಮಕ್ಕಳು ಕಾಣೆಯಾದರೆ ಮಾಹಿತಿ ನೀಡಲು ಪೊಲೀಸ್ ಕಿಯೋಸ್ಕ್ಗಳು, ಸೂಕ್ತ ಕಣ್ಗಾವಲು ಪ್ರದೇಶದಲ್ಲಿ ವಾಚ್ ಟವರ್ಗಳ ನಿರ್ಮಾಣ ಮಾಡಲಾಗಿದೆ" ಎಂದು ಅವರು ತಿಳಿಸಿದರು.
"ನಗರದ ಎಲ್ಲ ಪೊಲೀಸ್ ಸಿಬ್ಬಂದಿ ಹೊಸ ವರ್ಷಾಚರಣೆಯ ದಿನ ಕರ್ತವ್ಯದಲ್ಲಿರಲಿದ್ದು, ಇಬ್ಬರು ಹೆಚ್ಚುವರಿ ಆಯುಕ್ತರಿಗೆ ಭದ್ರತೆಯ ನೇತೃತ್ವ ವಹಿಸಲಾಗಿದೆ. ಅಲ್ಲದೇ ಓರ್ವ ಜಂಟಿ ಪೊಲೀಸ್ ಆಯುಕ್ತರು, 15 ಜನ ಡಿಸಿಪಿಗಳು, 45 ಜನ ಎಸಿಪಿ, 160 ಇನ್ಸ್‌ಪೆಕ್ಟರ್ಸ್, 600 ಪಿಎಸ್ಐಗಳು, 600 ಎಎಸ್ಐಗಳು, 1800 ಹೆಡ್ ಕಾನ್ಸ್ಟೇಬಲ್ಗಳು, 5,200 ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು." ಎಂದು ಹೇಳಿದರು.
"ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಇಂದಿರಾನಗರ ಹಾಗೂ ಕೋರಮಂಗಲಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಲಿದ್ದು, ಈಗಾಗಲೇ 8 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಉಳಿದಂತೆ ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸರಿಗೆ ಸಾಥ್ ನೀಡಲಿದ್ದಾರೆ." ಎಂದು ವಿವರಿಸಿದರು.
"ಪ್ರಮುಖ ಸ್ಥಳದಲ್ಲಿ ಡ್ರೋಣ್ ಕ್ಯಾಮೆರಾಗಳ ಮೂಲಕ ಹದ್ದಿನಕಣ್ಣು ಇಡಲಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಪರಾಧ ಹಿನ್ನೆಲೆಯುಳ್ಳವರು, ಮಾದಕ ಸರಬರಾಜುಗಾರರ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ವರ್ಷಾಂತ್ಯಕ್ಕೆ ಸಾಲು ಸಾಲು ರಜೆ: ಗೋವಾ ಬಿಟ್ಟು ಕಡಲನಗರಿಯತ್ತ ಮುಖ ಮಾಡಿದ ಪ್ರವಾಸಿಗರು