ಬೆಂಗಳೂರು: ರಸ್ತೆ ಮಧ್ಯೆ ಕಾರಿನಲ್ಲಿ ಹುಚ್ಚಾಟ ಮೆರೆದಿದ್ದ ಆರೋಪಿಗಳ ವಿರುದ್ಧ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿಸೆಂಬರ್ 15ರಂದು ಬೆಳಗ್ಗೆ ಎಕ್ಸ್ ಖಾತೆಯಲ್ಲಿ ಸಾರ್ವಜನಿಕರೊಬ್ಬರು ಹಂಚಿಕೊಂಡಿದ್ದ ಏರ್‌ಪೋರ್ಟ್ ರಸ್ತೆಯಲ್ಲಿ ನಡೆದಿದೆ ಎನ್ನಲಾದ ವಿಡಿಯೋದಲ್ಲಿ, ನಾಲ್ವರು ಯುವಕರ ತಂಡ DL3 CBA 9775 ನಂಬರಿನ ಕಾರಿನ ಸನ್ ರೂಫ್ ಹಾಗೂ ವಿಂಡೋ ಸ್ಪೇಸ್ ನಿಂದ ಹೊರಬಂದು ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿತ್ತು.
ಏರ್‌ಪೋರ್ಟ್ ರಸ್ತೆಯಲ್ಲಿ ನಡೆದಿದ್ದ ಘಟನೆ ಎಂದಿದ್ದ ಸಾರ್ವಜನಿಕರೊಬ್ಬರು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಗಂಭೀರವಾಗಿ ಪರಿಗಣಿಸಿರುವ ಚಿಕ್ಕಜಾಲ ಸಂಚಾರಿ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಇಂಡಿಯನ್ ಮೋಟಾರ್ ಸೈಕಲ್ ಆ್ಯಕ್ಟ್ 184 (ಅಪಾಯಕಾರಿ ಚಾಲನೆ), ಐಪಿಸಿ ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ಜೀವಹಾನಿಗೆ ಕಾರಣವಾಗಬಹುದಾದ ನಿರ್ಲಕ್ಷ್ಯತೆ ಹಾಗೂ ಅಪಾಯಕಾರಿ ಚಾಲನೆ) ಹಾಗೂ 283 (ಸಾರ್ವಜನಿಕ ಮಾರ್ಗಕ್ಕೆ ಅಡ್ಡಿ ಹಾಗೂ ಅಪಾಯಪಡಿಸುವಿಕೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿನ ಪ್ರಕರಣ- ವಾಹನ ಕದ್ದು ಸ್ಟಂಟ್:ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲೆಂದುದ್ವಿಚಕ್ರ ವಾಹನಗಳನ್ನ ಕದ್ದು ಅದರಲ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಇಬ್ಬರು ಆರೋಪಿಗಳನ್ನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು.