ಬೆಂಗಳೂರು :ಹಲವು ಬಾರಿ ಎಚ್ಚರಿಕೆ ನೀಡಿದರೂ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಗರದ ರೌಡಿ ಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಕ್ರಿಯಶೀಲರಾಗಿ ನಗರದ ಎಂಟು ವಲಯಗಳಲ್ಲಿ ವಾಸವಾಗಿದ್ದ 1200ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಮೇಲೆ ಸಾವಿರಾರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ದಾಳಿ ನಡೆಸಿ ಪರಿಶೀಲನೆ ನಡೆದಿದೆ.
ಚುನಾವಣೆ ವೇಳೆ ರೌಡಿ ಶೀಟರ್ಗಳನ್ನು ಕರೆಸಿ ವಾರ್ನಿಂಗ್ ಕೊಟ್ಟು ಜೈಲಿಗೆ ಕಳಿಸಿದ್ದೋರನ್ನೆಲ್ಲಾ ಪೊಲೀಸರು ಚುನಾವಣೆ ಮುಗಿದಮೇಲೆ ಬಿಡುಗಡೆಗೊಳಿಸಿ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ವಾರ್ನ್ ಮಾಡಿದ್ದರು. ಆದರೇ ನಗರದ ಕೆಲವೆಡೆ ರೌಡಿ ಆಸಾಮಿಗಳ ಪುಂಡಾಟ ಶುರುವಾಗಿತ್ತು. ಅಲ್ಲದೇ ಗಾಂಜಾ ಮತ್ತು ಡ್ರಗ್ಸ್ ಗಮ್ಮತ್ತು ಮತ್ತೆ ಶುರುವಾಗಿತ್ತು. ಮಾದಕ ಜಗತ್ತಿನ ವಿರುದ್ಧ ಮತ್ತು ರೌಡಿಸಂ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಬೆಂಗಳೂರು ಸಿಟಿ ಪೊಲೀಸರು ಇಂದು ನಗರದಾದ್ಯಂತ ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪಶ್ಚಿಮ ವಲಯದ ಕೇಂದ್ರ, ಪಶ್ಚಿಮ, ಉತ್ತರ ದಕ್ಷಿಣ ವಿಭಾಗದ 707 ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿ ವೇಳೆ 2 ವೆಪನ್ ಗಳು, ಒಂದು ವಾಹನ, 8 ಕೆಜಿ ಗಾಂಜಾ ಪತ್ತೆಯಾಗಿದೆ. ಅಲ್ಲದೇ ಜಾಮೀನು ರಹಿತ ವಾರೆಂಟ್ ಇಶ್ಯೂ ಆಗಿದ್ದರು ತಲೆಮರೆಸಿಕೊಂಡಿದ್ದ 11 ರೌಡಿಗಳು, ಜೊತೆಗೆ ಅಕ್ರಮವಾಗಿ ಲ್ಯಾಂಡ್ ಡೀಲಿಂಗ್ ಮಾಡುತ್ತಿರುವವರು ಸಹಾ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.