ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಳಿಸಿರುವ ಕೇಂದ್ರ ವಿಭಾಗದ ಹಲಸೂರು ಗೇಟ್ ಠಾಣೆ ಪೊಲೀಸರು, ಬುಧವಾರ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ರವಿಕುಮಾರ್‌ನ ವಿಚಾರಣೆ ನಡೆಸುತ್ತಿರುವ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮಲ್ಲೇಶ್ವರದಲ್ಲಿರುವ ರವಿಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಎರಡು ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ ರವಿಕುಮಾರ್ ಸೇರಿ ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ವೇಳೆ ಸಿಕ್ಕಿರುವ ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್‌ಗಳಲ್ಲಿನ ಮಾಹಿತಿಯನ್ನು ಸಂಗ್ರಹಿಸಲು ಸಿಐಡಿ ಸೈಬರ್ ಮತ್ತು ಟೆಕ್ನಿಕಲ್ ಸೆಲ್ ಮೊರೆ ಹೋಗಲು ಪೊಲೀಸರು ತೀರ್ಮಾನಿಸಿದ್ದಾರೆ. ಈಗಾಗಲೇ ಆರೋಪಿಗಳ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಡಿಲೀಟ್ ಮಾಡಿರುವ ಡೇಟಾವನ್ನು ರೀಟ್ರೀವ್ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್) ಕಳುಹಿಸಿದ್ದಾರೆ. ಡೇಟಾ ರೀಟ್ರೀವ್ ಮಾಡಿದರೆ, ಮಹತ್ವದ ವಿಚಾರಗಳು ಬೆಳಕಿಗೆ ಬರಲಿದೆ.