ಬೆಂಗಳೂರು:ಕರ್ನಾಟಕ ಬಂದ್ ಹಿನ್ನಲೆ, ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಲ್ಲಲ್ಲಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕರ್ನಾಟಕ ಹೋರಾಟಗಾರರ ಒಕ್ಕೂಟ ಸಂಘಟನೆಯಿಂದ ಬಂದ್ಗೆ ಬೆಂಬಲ ನೀಡದೆ, ಮೆಜೆಸ್ಟಿಕ್ನಲ್ಲಿ ಬಸ್ ಚಾಲಕರು, ನಿರ್ವಾಹಕರಿಗೆ, ಪ್ರಯಾಣಿಕರಿಗೆ ಹೂ ಕೊಡುವ ಮೂಲಕ ಬಂದ್ ಮಾಡದಂತೆ ಮನವಿ ಮಾಡಿದರು.
ಸಿಲಿಕಾನ್ ಸಿಟಿಯಲ್ಲಿ ಬಿಗಿ ಭದ್ರತೆ1 ಪ್ರಮುಖ ಸ್ಥಳಗಳಲ್ಲಿ ಖಾಕಿ ಕಣ್ಗಾವಲು ಇಡಲಾಗಿದ್ದು, ನಗರದ ಪ್ರಮಖ ಸ್ಥಳಗಳಲ್ಲಿ ಒಂದಾದ ಟೌನ್ ಹಾಲ್, ಮೆಜೆಸ್ಟಿಕ್ ರೈಲ್ವೆಸ್ಟೇಷನ್, ಬಸ್ ನಿಲ್ದಾಣ, ಓರಾಯನ್ ಮಾಲ್, ಮಂತ್ರಿ ಮಾಲ್ ಹೀಗೆ ಹಲವೆಡೆ ಎರಡು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಿ ಭದ್ರತೆಗೆ ಪೊಲೀಸರಿಂದ ಸರ್ಪಗಾವಲು ಹಾಕಲಾಗಿದೆ. ಹಾಗೆಯೇ ಟೌನ್ ಹಾಲ್ ಬಳಿ ಪ್ರತಿಭಟಾನಕಾರರು ಸೇರುವ ಹಿನ್ನೆಲೆ ಸ್ಥಳಕಾಗಮಿಸಿದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ನಗರದ ಕೆ.ಆರ್ ಮಾರ್ಕೆಟ್ನಲ್ಲಿ ಹೆಚ್ಚಿನ ಬೆಂಬಲ ದೊರೆತಿಲ್ಲ. ಕನ್ನಡ ಸಂಘಟನೆಗಳ ಒಕ್ಕೂಟ ನೀಡಿದ ಕರೆಗೆ ಬೆಂಬಲ ನೀಡದೆ, ಮುಂಜಾನೆಯಿಂದಲೇ ವ್ಯಾಪಾರಿಗಳು ಹೂವು ಹಣ್ಣು, ಸೊಪ್ಪು ತರಕಾರಿ, ಮಾರಾಟದಲ್ಲಿ ತೊಡಗಿದ್ದರು. ಗ್ರಾಹಕರ ಸಂಖ್ಯೆಯಲ್ಲಿ ಕೊಂಚ ಕಡಿಮೆಯಿದ್ದರೂ, ವ್ಯಾಪಾರಿಗಳು ಎಂದಿನಂತೆ ಮಾರಾಟದಲ್ಲಿ ತೊಡಗಿದ್ದರು.
ಇನ್ನೂ ಸೂಕ್ತ ಪೊಲೀಸ್ ಭದ್ರತೆಯನ್ನು ಮಾರುಕಟ್ಟೆಯಲ್ಲಿ ಒದಗಿಸಲಾಗಿದೆ. ಬಿಎಂಟಿಸಿ ಬಸ್‌ಗಳು, ಆಟೋಗಳು ಕೂಡಾ ಕೆ.ಆರ್ ಮಾರುಕಟ್ಟೆ ಸುತ್ತ ಸಂಚಾರಕ್ಕೆ ಲಭ್ಯವಿದೆ. ಹೀಗಾಗಿ ಕೆ.ಆರ್ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಿಗೆ ಬಂದ್ ಬಿಸಿ ತಟ್ಟಿಲ್ಲ. ಯಾವುದೇ ಗಲಾಟೆ, ಗಲಭೆಗಳು ಉಂಟಾಗದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.