ಬೆಂಗಳೂರು:ಗೂಂಡಾ ಕಾಯಿದೆಯಡಿ ಬಂಧಿತ ಆರೋಪಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸದ ಕಾರಣಕ್ಕೆ ಹೈಕೋರ್ಟ್ ಆತನ ಬಿಡುಗಡೆಗೆ ಆದೇಶ ನೀಡಿದೆ. ಬಂಧಿತ ವ್ಯಕ್ತಿ ರೋಷನ್ ಜಮೀರ್ ಅವರ ತಂದೆ ಮೊಹಮ್ಮದ್ ಶಫೀವುಲ್ಲಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಆರೋಪಿ ಅರೇಬಿಕ್ ಶಾಲೆಯಲ್ಲಿ ಕೇವಲ ಎರಡನೇ ತರಗತಿಯವರೆಗೆ ಓದಿದ್ದಾನೆ. ಮತ್ತು ಆತ ಮೊದಲ ಭಾಷೆಯಾಗಿ ಅರೇಬಿಕ್ ಅಥವಾ ಉರ್ದು ಮಾತ್ರ ಓದಿದ್ದಾನೆ. ಆತನಿಗೆ ಇತರೆ ಭಾಷೆಗಳು ತಿಳಿದಿಲ್ಲ. ಜೊತೆಗೆ ಆತ ಓದಿರುವುದು ಮೂರು ವರ್ಷ ಮಾತ್ರ. ಆದರೆ, ಭಾರತೀಯ ಸಂವಿಧಾನದ ಕಲಂ 22(5)ರ ಪ್ರಕಾರ ಅಧಿಕಾರಿಗಳು ಯಾವುದೇ ಬಂಧಿತ ಆರೋಪಿಗೆ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸಬೇಕು. ಆದರೆ, ಈ ಪ್ರಕರಣದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪೀಠ ತಿಳಿಸಿದೆ. ಅಲ್ಲದೆ, ಅಧಿಕಾರಿಗಳು ಆರೋಪಿಯನ್ನು ಏಕೆ ಬಂಧಿಸಲಾಗಿದೆ ಮತ್ತು ಪ್ರಕರಣದ ವಿವರಗಳನ್ನು ಆತನಿಗೆ ತಿಳಿದಿರುವ ಭಾಷೆಗೆ ಅನುವಾದಿಸಿ, ಆತನಿಗೆ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಆತನ ಬಿಡುಗಡೆಗೆ ಆದೇಶಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರಿಂದ ವಾದ:ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿ ಕೇವಲ ಎರಡನೇ ತರಗತಿವರೆಗೆ ಉರ್ದು ಮಾಧ್ಯಮದಲ್ಲಿ ಓದಿದ್ದಾನೆ. ಆದರೆ, ಅಧಿಕಾರಿಗಳು ಆತನಿಗೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿದ್ದ ದಾಖಲೆಗಳನ್ನು ಮಾತ್ರ ಒದಗಿಸಿದ್ದಾರೆ. ಇದು ಸಂವಿಧಾನದ ಕಲಂ 22(5)ರ ಉಲ್ಲಂಘನೆಯಾಗಿದೆ ಎಂದು ವಿವರಿಸಿದ್ದರು. ಅಲ್ಲದೆ, ಆರೋಪಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸದ ಕಾರಣ ಆತನಿಗೆ ತನ್ನನ್ನು ಏಕೆ ಬಂಧಿಸಲಾಗಿದೆ ಎಂಬ ವಿವರಗಳನ್ನು ತಿಳಿದುಕೊಳ್ಳಲಾಗಿಲ್ಲ. ಜೊತೆಗೆ ಗೂಂಡಾ ಕಾಯಿದೆ ಸೆಕ್ಷನ್ 8ರ ಅಡಿ ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ. ಹಾಗಾಗಿ ಬಿಡುಗಡೆಗೆ ಆದೇಶ ನೀಡಬೇಕು ಎಂದು ಕೋರಿದ್ದರು.