ಬೆಂಗಳೂರು: ಸಂಪಿಗೆಹಳ್ಳಿ ಠಾಣೆಯ ಹೊಯ್ಸಳ ಪೊಲೀಸರ ದಂಪತಿಯಿಂದ ಹಣ ವಸೂಲಿ ಮಾಡಿದ ಪ್ರಕರಣ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿತ್ತು. ತಪ್ಪಿಗೆ ಪ್ರಾಯಶ್ಚಿತ್ತ ಎನ್ನುವಂತೆ ಇಬ್ಬರು ಸಿಬ್ಬಂದಿಯನ್ನ ಅಮಾನತು ಕೂಡ ಮಾಡಲಾಗಿತ್ತು. ಇನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ಈ ಕುರಿತು ಸುದ್ದಿ ಪ್ರಸಾರವಾದ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
ರಾತ್ರಿ ವೇಳೆ, ಹೊಯ್ಸಳ ಹಾಗೂ ಚೀತಾ ವಾಹನದಲ್ಲಿ ಗಸ್ತು ನಡೆಸುವ ಪೊಲೀಸ್ ಮತ್ತು ಸಿಬ್ಬಂದಿ ಪುಟ್ಪಾತ್ ವ್ಯಾಪಾರಿಗಳ ಬಳಿ ಹಣ ಪಡೆಯಬಾರದು. ಜೊತೆಗೆ ಸುಖಾಸುಮ್ಮನೆ ವಾಹನ ಸವಾರರನ್ನು ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿ ಅವರಿಂದ ಹಣ ವಸೂಲಿ ಮಾಡಬಾರದು. ಸಾರ್ವಜನಿಕರ ಜೊತೆ ಸೌಹಾರ್ದತೆಯಿಂದ ವರ್ತಿಸಿ, ಮಹಿಳೆಯರು ಮಕ್ಕಳು ಓಡಾಡುವ ವಾಹನಗಳನ್ನ ಸುಖಾಸುಮ್ಮನೆ ತಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.