ಬೆಂಗಳೂರು: ಡಿ.ಜಿ. ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರಕ್ಕೆ ಪೊಲೀಸರೇ ಕಾರಣರಾಗಿದ್ದಾರೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಗರ ಘಟಕದ ಕಾರ್ಯದರ್ಶಿ ಮೊಹಮ್ಮದ್ ಷರೀಫ್ ಆರೋಪಿಸಿದ್ದಾರೆ.
ಬೆಂಗಳೂರು ಗಲಭೆಗೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ: ಎಸ್ಡಿಪಿಐ ಗಂಭೀರ ಆರೋಪ - SDPI
ಬೆಂಗಳೂರು ಗಲಭೆಯಲ್ಲಿ ಬಂಧನಕ್ಕೊಳಗಾದ ಅಮಾಯಕರನ್ನು ತಕ್ಷಣವೇ ಬಿಡುಗಡೆಗೊಳಿಸಿ, ನೈಜ ಆರೋಪಿಗಳನ್ನು ಪೊಲೀಸರು ಬಂಧಿಸಲಿ, ಗೋಲಿಬಾರ್ನಲ್ಲಿ ಮೃತಪಟ್ಟ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಎಸ್ಡಿಪಿಐ ಆಗ್ರಹಿಸಿದೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಬಂಧನವಾಗಿರುವ ಸಗಾಯಪುರಂ ವಾರ್ಡ್ ಕಾರ್ಪೊರೇಟರ್, ಎಸ್ಡಿಪಿಐ ಮುಖಂಡ ಮೊಹಮ್ಮದ್ ಮುಜಾಮಿಲ್ ಬಂಧನ ಹಾಗೂ ಪ್ರಚೋದನೆಗೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ್ದಾರೆ. ಶಾಸಕನ ಸೋದರಳಿಯ ನವೀನ್ ಕೆಲ ದಿನಗಳ ಹಿಂದೆ ಪ್ರವಾದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ಧ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸಿದ್ದಾರೆ.
ಮೊದಲೇ ಆಕ್ರೋಶಗೊಂಡಿದ್ದ ಜನಸಮೂಹ ಠಾಣೆಯ ಬಳಿ ಜಮಾಯಿಸಿದ್ದರಿಂದ ಅಶಾಂತಿಯುತ ವಾತಾವರಣ ನಿರ್ಮಾಣಗೊಂಡಿತ್ತು. ಪೊಲೀಸ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಿದ್ದರೆ, ಈ ಘಟನೆಯನ್ನು ಖಂಡಿತ ತಪ್ಪಿಸಬಹುದಾಗಿತ್ತು. ಈ ಹಿಂದೆ ಆಸಿಫ್ ಎಂಬಾತ ಶಾಸಕ ಅಖಂಡ ಶ್ರೀನಿವಾಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದರಿಂದ ಕೇವಲ ಹತ್ತು ನಿಮಿಷದಲ್ಲಿ ಆತನನ್ನು ಬಂಧಿಸಿದ್ದರು. ಆದರೆ, ಇಲ್ಲಿ ಸ್ಥಳೀಯ ಸಮುದಾಯ ಆಕ್ರೋಶಗೊಂಡಿದ್ದರೂ ಪೊಲೀಸರು ತೋರಿದ ತಾರತಮ್ಯ ಹಾಗೂ ನಿರ್ಲಕ್ಷ್ಯ ಧೋರಣೆಯೇ ಪರಿಸ್ಥಿತಿ ಕೈಮೀರಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.