ಬೆಂಗಳೂರು: ಮನೆಗಳ್ಳತನಕ್ಕೆಂದೇ ವಿಮಾನದಲ್ಲಿ ಬೆಂಗಳೂರಿಗೆ ಬಂದು ಸದ್ದಿಲ್ಲದೆ ದುಷ್ಕೃತ್ಯ ಮುಗಿಸಿ ವಾಪಸಾಗುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಹೈಟೆಕ್ ಕಳ್ಳರನ್ನು ಬಾಣಸವಾಡಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ.
ಬಂಧಿತರನ್ನು ಹರಿದಾಸ್ ಬರಾಯಿ, ಪಾರ್ಥ ಹಲ್ದಾರ್ ಹಾಗೂ ರತನ್ ಸಾಹಾ ಎಂದು ಗುರುತಿಸಲಾಗಿದೆ. ಇವರು ಕಳ್ಳತನಕ್ಕಾಗಿ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದು, ಹಗಲಿನಲ್ಲಿ ಓಡಾಡಿ ಬೀಗ ಹಾಕಿದ ಹಾಗೂ ಮುಂದೆ ದಿನಪತ್ರಿಕೆ ಇರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ರಾತ್ರಿ ವೇಳೆಗೆ ಬಂದು ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಬಳಿಕ ವಿಮಾನದ ಮೂಲಕವೇ ಹಿಂದಿರುಗುತ್ತಿದ್ದರಂತೆ.
ಫೆಬ್ರವರಿ 12ರಂದು ಇದೇ ರೀತಿ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದು, ರಸ್ತೆಯಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ಮೂಲ ಪತ್ತೆಯಾಗಿತ್ತು. ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಿದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದ್ದು, 740 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದೆ.
ಆರೋಪಿಗಳ ಪೈಕಿ ಹರಿದಾಸ್ ಈ ಹಿಂದೆಯೂ ದೆಹಲಿ ಹಾಗೂ ಸಿಕಂದರಾಬಾದ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ಕೊಟ್ಟು ಅನುಷ್ಠಾನಕ್ಕೆ ತರಲು ಬದ್ಧ: ಸಿಎಂ ಬೊಮ್ಮಾಯಿ