ಬೆಂಗಳೂರು:ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ವಿವಾದ ಮಿತಿಮೀರಿದೆ. ಸದ್ಯ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯ ನಿಯಂತ್ರಣ ನಿಜಕ್ಕೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರಲ್ಲಿರುವ ಶಾಂತಿಯುತ ಪರಿಸ್ಥಿತಿಯನ್ನ ಯಥಾವತ್ತಾಗಿ ಮುಂದುವರೆಸಲು ಪೊಲೀಸರು ಶಾಲಾ - ಕಾಲೇಜು ಆಡಳಿತ ಮಂಡಳಿಗಳು ಮತ್ತು ಧಾರ್ಮಿಕ ಮುಖಂಡರುಗಳ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ವಿವಾದ ತಾರಕ್ಕೇರಿದ ಬೆನ್ನಲ್ಲೇ ನಗರ ಪೊಲೀಸರು ಎಚ್ಚೆತ್ತು ಕೊಂಡಿದ್ದಾರೆ.
ಈಗಾಗಲೇ ಶಾಲಾ - ಕಾಲೇಜುಗಳ ಸುತ್ತ 200 ಮೀಟರ್ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮೀಷನರ್ ಕಮಲ್ ಪಂತ್ ನಿನ್ನೆ ಆದೇಶ ಮಾಡಿದ್ದರು. ಆ ಬೆನ್ನಲ್ಲೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಶಾಲಾ ಆಡಳಿತ ಮಂಡಳಿ ಪೊಲೀಸರು ಸಭೆ ನಡೆಸಿದ್ದಾರೆ. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆದಿದೆ.
ಬೆಂಗಳೂರಿನ ಶಾಲಾ ಕಾಲೇಜಿನಲ್ಲಿ ಒಂದು ಸುತ್ತಿನ ಸಭೆ ನಡೆಸಿ ಶಾಂತಿ ಕಾಪಾಡಲು ಪೊಲೀಸರು ಸೂಚಿಸಿದ್ದಾರೆ. ಶಾಲೆಯಲ್ಲಿ ಈ ಹಿಂದೆ ಯಾವ ರೀತಿಯ ನಿಯಮಗಳಿತ್ತೊ ಅದನ್ನೇ ಮುಂದುವರೆಸಿ. ವಿದ್ಯಾರ್ಥಿಗಳಿಗೆ ಈ ವಿಚಾರದ ಬಗ್ಗೆ ಅರಿವು ಮೂಡಿಸಿ. ಏನಾದರೂ ಅಹಿತಕರ ಘಟನೆಗಳು ಸಂಭವಿಸುವ ಮುನ್ಸೂಚನೆ ಇದ್ದರೆ ತಕ್ಷಣವೇ ನಮಗೆ ಮಾಹಿತಿ ನೀಡಿ. ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ಶಿಕ್ಷಕರು ನಮಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
ಯಾವುದೇ ಪ್ರತಿಭಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲು ಸೂಚನೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಎಲ್ಲ ಧಾರ್ಮಿಕರ ಮುಖಂಡರೊಂದಿಗೆ ಅಯಾ ಠಾಣೆಯ ಇನ್ಸ್ಪೆಕ್ಟರ್ಗಳು ಸಭೆ ನಡೆಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿರುವ ಶಾಂತಿಯುತ ವಾತಾವರಣ ಮುಂದುವರೆಯಲು ನಿಮ್ಮ ಬೆಂಬಲ ತುಂಬಾ ಅಗತ್ಯ. ಶಾಂತಿಗೆ ಭಂಗ ಉಂಟುಮಾಡುವ ವಿಚಾರಗಳು ನಿಮಗೆ ತಿಳಿದು ಬಂದರೆ ನಮಗೆ ತಕ್ಷಣವೇ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಈಗಾಗಲೇ ಶಾಲಾ- ಕಾಲೇಜು ಮಕ್ಕಳು ಸದಾ ಸೇರುವ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಪಾರ್ಕ್ಗಳಲ್ಲೂ ಕೂಡ ವಿದ್ಯಾರ್ಥಿಗಳು ಒಂದೆಡೆ ಸೇರದಂತೆ ಎಚ್ಚರಿಕೆ ವಹಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿದ್ದು, ಪೊಲೀಸ್ ಬೀಟ್ ವ್ಯವಸ್ಥೆಯನ್ನ ಕೂಡ ಜಾಸ್ತಿಗೊಳಿಸಿದ್ದಾರೆ. ಬೆಂಗಳೂರಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದೆ.
ಓದಿ:ಜ್ಞಾನ ಹಾಗೂ ಪರಿಶ್ರಮದಿಂದ ದೇಶ ಕಟ್ಟಬೇಕೇ ಹೊರತು ಭಾವನಾತ್ಮಕ ವಿಚಾರಗಳಿಂದ ಅಲ್ಲ: ಡಿಕೆಶಿ