ಬೆಂಗಳೂರು : ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಮೈಸೂರು ರಸ್ತೆಯ ಸಿಎಆರ್ನಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ ನಮನ ಸಲ್ಲಿಸಿ, ಮಾತನಾಡಿದ ಅವರು, ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೆಯೋ ಅಲ್ಲಿಗೆ ಬಂಡವಾಳ ಹೆಚ್ಚಾಗಿ ಬರುತ್ತದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಿ, ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಪರಿಣಾಮ ನಾಡಿನ ಜನರ ತಲಾ ಆದಾಯದ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ನಾಡಿನ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು. ತಂತ್ರಜ್ಞಾನ ಬೆಳೆದಂತೆ ಪೊಲೀಸ್ ವ್ಯವಸ್ಥೆ ಹೊಸ ಹೊಸ ಸವಾಲುಗಳಿಗೆ ಮುಖಾಮುಖಿ ಆಗುತ್ತದೆ. ಸೈಬರ್ ತಂತ್ರಜ್ಞಾನದ ಜತೆಗೆ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆ ಹಿಡಿಯಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.
ಸುಳ್ಳು ಸುದ್ದಿಗಳು, ಅಶಾಂತಿ ಸೃಷ್ಟಿಸುವ ಮಾತುಗಳು, ದ್ವೇಷ ಹರಡುವ ಸುಳ್ಳುಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಸಮಾನವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಮೇಲಿದೆ. ಆದ್ದರಿಂದ ಸುಳ್ಳು ಸುದ್ದಿ ಹರಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಸುಳ್ಳು ಮತ್ತು ದ್ವೇಷದ ಸುದ್ದಿಗಳು ನಾಡಿನ GDP ಗೆ ಮಾರಕ. ಅಶಾಂತಿಯ ಪರಿಣಾಮವಾಗಿ ಜನರ ತಲಾ ಆದಾಯಕ್ಕೂ ಧಕ್ಕೆಯಾಗುತ್ತದೆ. ಆದ್ದರಿಂದ ಸುಳ್ಳು ಸುದ್ದಿ ಹರಡುವ ಜಾಲ ತಾಣಗಳು ಮತ್ತು ಅವನ್ನು ನಿರ್ವಹಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.