ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಿ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿ, ಬೇಸತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಗುತ್ತಿಗೆದಾರನಿಗೆ ನೊಟೀಸ್ ನೀಡಿ ಶೇಷಾದ್ರಿಪುರ ಉಪವಿಭಾಗದ ಎಸಿಪಿ ವಿಚಾರಣೆ ನಡೆಸಿದ್ದಾರೆ. ಒಟ್ಟು 57 ಗುತ್ತಿಗೆದಾರರಿಗೆ ಪೊಲೀಸರು ನೋಟಿಸ್ ನೀಡಿದ್ದರು. 16 ಮಂದಿ ಗುತ್ತಿಗೆದಾರರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಪೊಲೀಸರು ಗುತ್ತಿಗೆದಾರರಿಂದ ಮಾಹಿತಿ ಪಡೆದುಕೊಂಡರು.
ಸರ್ಕಾರ ರಚನೆಯಾಗುತ್ತಿದ್ದಂತೆ ಬಿಬಿಎಂಪಿ ಗುತ್ತಿಗೆದಾರರ ಸಂಘವು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಬಾಕಿ ಬಿಲ್ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ನಂತರ ಸಂಘದಲ್ಲಿದ್ದ ಗುತ್ತಿಗೆದಾರ ಹೇಮಂತ್, ಯಾವುದೇ ಕಮಿಷನ್ ಪಡೆದಿಲ್ಲ ಎಂದು ಉಲ್ಟಾ ಹೊಡೆದಿದ್ದರು. ಈ ಮಧ್ಯೆ ರಾಜ್ಯಪಾಲರು ಸಹ ಸಂಬಂಧಪಟ್ಟ ಪೊಲೀಸರಿಗೆ ಈ ಬಗ್ಗೆ ಪರಿಶೀಲಿಸುವಂತೆ ಶಿಫಾರಸು ಮಾಡಿದ್ದರು. ರಾಜ್ಯಪಾಲರಿಗೆ ಪತ್ರ ಬರೆದು ಸಹಿ ಹಾಕಿದ್ದ ಎಲ್ಲ ಬಿಬಿಎಂಪಿ ಗುತ್ತಿಗೆದಾರರಿಗೆ ಹೈಗ್ರೌಂಡ್ಸ್ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಕರೆದು ಹೇಳಿಕೆ ದಾಖಲಿಸಿಕೊಂಡಿದ್ದಾರೆ.