ಬೆಂಗಳೂರು:18 ನಿಮಿಷದಲ್ಲಿ 72ರ ವೃದ್ಧೆಯೋರ್ವರನ್ನ ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮರಾದಲ್ಲಿ ಶಂಕಿತ ಹಂತಕನ ಚಲನವಲನ ಸೆರೆಯಾಗಿದ್ರೂ ಕೂಡ ಆರೋಪಿ ಎಲ್ಲಿದ್ದಾನೆ ಅನ್ನೋ ಮಾಹಿತಿ ಪತ್ತೆಯಾಗದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಹೌದು, ಕಳೆದ ಫೆಬ್ರವರಿ 5ರಂದು ದುಷ್ಕರ್ಮಿಗಳು ಒಂಟಿ ಮಹಿಳೆ ಸಂತೋಷಿ ದೇವಿ ಎಂಬುವವರನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಎಸ್.ಆರ್ ನಗರದ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದೇ ಏರಿಯಾದ ಅಪಾರ್ಟ್ಮೆಂಟ್ವೊಂದರಲ್ಲಿ ಸಂತೋಷಿ ದೇವಿ ಒಂಟಿಯಾಗಿ ವಾಸವಾಗಿದ್ದರು.
ಇದನ್ನರಿತ ಹಂತಕರು ಕಳೆದ ಆರು ತಿಂಗಳ ಹಿಂದೆ ಆಕೆಯನ್ನು ಕೊಲೆಗೈದು ಮನೆಯಲ್ಲಿದ್ದ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿದ್ರು. ಈ ಕೃತ್ಯ ಪಕ್ಕದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದರ ಅನ್ವಯ ಆರೋಪಿಯು ಬೈಕ್ನಲ್ಲಿ ಬಂದು ಕದ್ದುಮುಚ್ಚಿ ಓಡಾಡಿ ಮುಖಕ್ಕೆ ಕರ್ಚೀಪ್ ಹಾಕ್ಕೊಂಡು ಸಂತೋಷಿ ಅವರ ಮನೆಗೆ ಎಂಟ್ರಿ ಕೊಟ್ಟಿದ್ದ.
ಇದನ್ನಾಧರಿಸಿ ಪೊಲೀಸರು ಶಂಕಿತ ವ್ಯಕ್ತಿಯ ಫೋಟೋವನ್ನು 3 ಸಾವಿರ ಜನರಿಗೆ ವಾಟ್ಸಪ್, ಫೇಸ್ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೂ ಹಂತಕನ ಸುಳಿವು ಇನ್ನೂ ಸಿಕ್ಕಿಲ್ಲ. ಹೀಗಾಗಿ ಪೊಲೀಸರಿಗೆ ಈ ಕೇಸ್ ದೊಡ್ಡ ತಲೆನೋವಾಗಿದೆ.