ಬೆಂಗಳೂರು:ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆದರೆ, ಆರೋಪಿತರ ಕೆಲ ಕೋಡ್ ವರ್ಡ್ಗಳು ಇದ್ದು, ಅದನ್ನು ಡಿಕೋಡ್ ಮಾಡುವುದು ಸವಾಲಾಗಿದೆ.
ಈಗಾಗಲೇ 15 ಜನರು ಸಿಕ್ಕಿಬಿದ್ದಿರುವುದು ಗೊತ್ತೇ ಇದೆ. ಅವರನ್ನು ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಚೇರಿ ಮತ್ತು ಮನೆಗಳ ಮೇಲೆ ದಾಳಿ ವೇಳೆ ವಶಕ್ಕೆ ಪಡೆದುಕೊಂಡಿರುವ ವಸ್ತುಗಳಲ್ಲಿ ಕೆಲವೊಂದು ಡೈರಿಗಳು ಸಿಕ್ಕಿದೆ. ಆ ಡೈರಿಯಲ್ಲಿ ಉಲ್ಲೇಖಿಸಿರುವ ಕೋಡ್ ವರ್ಡ್ಗಳು ಈಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಮುಖ ಆರೋಪಿಗಳಾದ ನಾಸೀರ್ ಪಾಷಾ ಹಾಗೂ ಮೊಹಮ್ಮದ್ ಅಶ್ರಫ್ ಇಬ್ಬರನ್ನು ಪೂರ್ವ ವಿಭಾಗ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರು ಉಳಿದ ಆರೋಪಿಗಳಿಗೆ ದೇಶ ವಿರೋಧಿ ಕೃತ್ಯಗಳಿಗೆ ಬೇಕಾದಂತಹ ಸೂಚನೆ ಹಾಗೂ ಕೆಲವೊಂದು ಪ್ರಚೋದನಾಕಾರಿ ಅಂಶಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಎನ್ನಲಾಗುತ್ತಿದೆ.