ಬೆಂಗಳೂರು: ಆತ ಕೆಲವೇ ದಿನಗಳ ಹಿಂದಷ್ಟೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ರಾಜಧಾನಿಯಲ್ಲಿ ಕಾಲಿಡುತ್ತಿದ್ದಂತೆ ತಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾಗಿರುವುದನ್ನು ಕಂಡಿದ್ದಾನೆ. ಹಣವಿಲ್ಲದಿದ್ದರೂ ಧೈರ್ಯ ಮಾಡಿ ಥಿಯೇಟರ್ಗೆ ನುಗ್ಗಿ ಸಿನಿಮಾ ವೀಕ್ಷಿಸಲು ಆತ ಮುಂದಾಗಿದ್ದ. ಆದರೆ ಥಿಯೇಟರ್ ಭದ್ರತಾ ಸಿಬ್ಬಂದಿ ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಬೆಂಗಳೂರಿಗೆ ಕೆಲಸ ಅರಸಿ ಬಂದು ಜೈಲು ಸೇರಲಿದ್ದ ಅನಾಥನ ಬದುಕನ್ನೇ ಬದಲಿಸಿದ ಇನ್ಸ್ಪೆಕ್ಟರ್!
ಕಂಬಿ ಹಿಂದೆ ಇರಬೇಕಾಗಿದ್ದವನು ಇದೀಗ ಹೋಟೆಲ್ವೊಂದರ ಕಾರ್ಮಿಕ. ಅರೆಸ್ಟ್ ಆಗಬೇಕಾದವನು ಅದು ಹೇಗೆ ಕಾರ್ಮಿಕನಾಗಿದ್ದಾನೆ ಎಂದು ಹುಬ್ಬೇರಿಸಬೇಡಿ. ಅದೇನು ಅಂತಾ ಈ ಸ್ಟೋರಿ ಓದಿ.
ಬಾಲ್ಯದಲ್ಲೇ ತಂದೆ-ತಾಯಿ ಇಲ್ಲದೆ ಒಬ್ಬಂಟಿಗನಾಗಿದ್ದ ಕಲಬುರಗಿ ಮೂಲದ ಸುರೇಶ್ ಎಂಬಾತ ಕೆಲಸ ಅರಸಿ ಕೆಲ ದಿನಗಳ ಹಿಂದೆ ರಾಜಧಾನಿಗೆ ಬಂದಿದ್ದ. ಸಣ್ಣಪುಟ್ಟ ಕೆಲಸ ಮಾಡಿ ಸೆಂಟ್ಜಾನ್ಸ್ ಆಸ್ಪತ್ರೆ ಆವರಣದಲ್ಲಿ ರಾತ್ರಿ ಕಳೆಯುತ್ತಿದ್ದ. ಹೀಗಿರಬೇಕಾದರೆ ಕಳೆದ 15 ದಿನಗಳ ಹಿಂದೆ ಕೋರಮಂಗಲದ ಫೋರಂ ಮಾಲ್ನಲ್ಲಿ ತಮ್ಮ ನೆಚ್ಚಿನ ನಟ ಪ್ರಭಾಸ್ ಅಭಿನಯದ ಸಾಹೋ ಚಿತ್ರ ಹಾಕಿದ್ದನ್ನು ಕಂಡಿದ್ದಾನೆ. ಸಿನಿಮಾ ನೋಡಬೇಕೆಂಬ ಆಸೆ. ಆದರೆ ಜೇಬಲ್ಲಿ ದುಡ್ಡಿಲ್ಲ. ಹೀಗಿದ್ದರೂ ಒಂದು ಕೈ ನೋಡಿಬಿಡೋಣ ಎಂದು ಪಿವಿಆರ್ ತೆರಳಿದ್ದ. ಹೇಗಾದರೂ ಸರಿ ಸೆಕ್ಯುರಿಟಿ ಕಣ್ತಪ್ಪಿಸಿ ಸಿನಿಮಾ ಮಂದಿರದ ಒಳ ನುಗ್ಗಲು ಪ್ರಯತ್ನಿಸಿದ್ದಾನೆ. ಅದರೆ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಟಿಕೆಟ್ ಇಲ್ಲದಿರುವುದನ್ನು ಕಂಡು ಆತನಿಗೆ ಪ್ರವೇಶ ನಿರಾಕರಿಸಿದ್ದಾರೆ. ಇಷ್ಟಾದರೂ ಸುಮ್ಮನಾಗದ ಸುರೇಶ್, ಸಿನಿಮಾ ವೀಕ್ಷಿಸಲು ಸೆಕ್ಯುರಿಟಿ ಬಳಿ ಜಗಳವಾಡಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಆಡುಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ದಿಲೀಪ್, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೊಬ್ಬ ಅನಾಥ. ಅಲ್ಲದೇ ಪ್ರಭಾಸ್ ಅಭಿಮಾನಿಯಾಗಿದ್ದು, ಸಿನಿಮಾ ನೋಡಲು ಹಣವಿರಲಿಲ್ಲ. ಹೀಗಾಗಿ ಇಂತಹ ಕೆಲಸ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಯುವಕನ ಮುಗ್ಧತೆ ಕಂಡ ಇನ್ಸ್ಪೆಕ್ಟರ್ ದಿಲೀಪ್, ಆತನಿಗೆ ಊಟ, ಬಟ್ಟೆ ನೀಡಿ ತಮ್ಮ ಸ್ವಂತ ಹಣದಿಂದ ಪಿವಿಆರ್ನಲ್ಲಿ ಸಿನಿಮಾ ನೋಡಲು ಅವಕಾಶ ಕಲ್ಪಿಸಿದ್ದಾರೆ. ನಂತರ ಆತನಿಗೆ ಹೋಟೆಲ್ವೊಂದರಲ್ಲಿ ಕೆಲಸ ಕೊಡಿಸಿದ್ದಲ್ಲದೆ, ಠಾಣೆಯಲ್ಲಿ ಹೌಸ್ ಕೀಪಿಂಗ್ ಕೆಲಸ ನೀಡಿದ್ದಾರೆ. ಬಡತನದಲ್ಲಿ ನಲುಗಿದ್ದ ಸುರೇಶ್ ಜೀವನದಲ್ಲಿ ಹೊಸ ಬದುಕು ತೆರೆದಂತಾಗಿದೆ. ಇನ್ಸ್ಪೆಕ್ಟರ್ ದಿಲೀಪ್ ಅವರ ಹೃದಯವಂತಿಕೆ ಕಂಡು ನಗರದ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.