ಬೆಂಗಳೂರು: ಕೊರೊನಾ ಮಹಾಮಾರಿಗೆ ಮಹಾನಗರದಲ್ಲಿ ಕಳೆದ ಎರಡು ದಿನದಲ್ಲಿ ಇಬ್ಬರು ಮೃತಪಟ್ಟ ಹಿನ್ನಲೆ ಪೊಲೀಸ್ ತಪಾಸಣೆ ಇನ್ನಷ್ಟು ಬಿಗಿಗೊಳಿಸಲಾಗಿದೆ.
ಬೆಂಗಳೂರಲ್ಲಿ ಕೊರೊನಾಗೆ ಮೂರನೇ ಬಲಿ: ಮತ್ತಷ್ಟು ಬಿಗಿಯಾದ ಪೊಲೀಸ್ ತಪಾಸಣೆ - ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್
ಬೆಂಗಳೂರಿನ ಸೀಲ್ಡೌನ್ ಪ್ರದೇಶಗಳಾದ ಬಾಪೂಜಿನಗರ, ಪಾದರಾಯನಪುರ ಹಾಗೂ ಟಿಪ್ಪು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ತಪಾಸಣೆ ಅತ್ಯಂತ ಬಿಗಿಗೊಂಡಿದೆ. ಏ.20 ರ ನಂತರ ಪರಿಸ್ಥಿತಿ ಆಧರಿಸಿ ತಪಾಸಣೆ ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
![ಬೆಂಗಳೂರಲ್ಲಿ ಕೊರೊನಾಗೆ ಮೂರನೇ ಬಲಿ: ಮತ್ತಷ್ಟು ಬಿಗಿಯಾದ ಪೊಲೀಸ್ ತಪಾಸಣೆ sdfd](https://etvbharatimages.akamaized.net/etvbharat/prod-images/768-512-6812733-thumbnail-3x2-vish.jpg)
ನಗರದಲ್ಲಿ ಇಂದು ಕೋಲಾರದ ವ್ಯಕ್ತಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೊಬ್ಬರು ಅಸುನೀಗಿದ್ದಾರೆ. ಈ ಹಿಂದೆ ಒಂದು ಸಾವು ಸಂಭವಿಸಿದ್ದು, ಒಟ್ಟು ಸಿಲಿಕಾನ್ ಸಿಟಿಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಅಲ್ಲದೆ ಒಟ್ಟು 71 ಮಂದಿ ಕೊರೊನಾ ಸೋಂಕು ಪೀಡಿತರಾಗಿದ್ದಾರೆ. ಇವರಲ್ಲಿ 35 ಜನ ಗುಣಮುಖರಾಗಿ ತೆರಳಿದ್ದಾರೆ. ಇತರೆ 34 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಟ್ಟು 279 ರ ಗಡಿ ತಲುಪಿದೆ. ರಾಜ್ಯದ ಎಂಟಕ್ಕೂ ಹೆಚ್ಚು ಜಿಲ್ಲೆಗಳು ಅತ್ಯಂತ ಸೂಕ್ಷ್ಮ ವಲಯಗಳೆಂದು ಗುರುತಿಸಿಕೊಂಡಿವೆ. ರಾಜ್ಯ ರಾಜಧಾನಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದೀಗ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನಲೆ ಅನಾವಶ್ಯಕವಾಗಿ ಸುತ್ತಾಡುವವರಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಬೇಕಾಬಿಟ್ಟಿ ಓಡಾಡುವವರನ್ನು ಕಠಿಣ ತಪಾಸಣೆಗೆ ಒಳಪಡಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿದೆ. ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ಮೇರೆಗೆ ಪೊಲೀಸರು ಬಿಗಿಯಾದ ತಪಾಸಣೆ ನಡೆಸುತ್ತಿದ್ದಾರೆ. ಪಾಸ್ ಇದ್ದರೆ ಮಾತ್ರ ಸಂಚರಿಸಲು ಅವಕಾಶ ನೀಡುತ್ತಿದ್ದಾರೆ. ಅನಾರೋಗ್ಯದ ಕಾರಣ ಹಾಗೂ ದಾಖಲೆ ನೀಡಿ ತೆರಳುವವರಿಗೆ ಮಾತ್ರ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.