ಬೆಂಗಳೂರು:ಮಾದಕ ವಸ್ತು ಸರಬರಾಜುದಾರರ ವಿರುದ್ಧ ಸದಾ ಕಾರ್ಯಾಚರಣೆಯಲ್ಲಿರುವ ಬೆಂಗಳೂರು ಪೊಲೀಸರು ರಾಷ್ಟ್ರದಲ್ಲೇ ಮೊದಲ ಬಾರಿಗೆ ವಿದೇಶಿ ಮೂಲದ ಮಾದಕ ದಂಧೆಕೋರನಿಗೆ ಸಂಬಂಧಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನೈಜೀರಿಯಾ ಮೂಲದ ಪೀಟರ್ ಇಕೆಡಿ ಬೆಲನ್ವು (38) ಎಂಬ ಮಾದಕ ಸರಬರಾಜುದಾರನಿಗೆ ಸಂಬಂಧಿಸಿದ 12.60 ಲಕ್ಷ ರೂ. ನಗದನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
2023ನೇ ಸಾಲಿನ ನವೆಂಬರ್ ತಿಂಗಳಲ್ಲಿ ವಿದ್ಯಾರಣ್ಯಪುರ ಠಾಣಾ ಪೊಲೀಸರು ಆರೋಪಿ ಪೀಟರ್ ಇಕೆಡಿ ಬೆಲನ್ವುನನ್ನು ಬಂಧಿಸಿದ್ದರು. ರೂಢಿಗತ ಡ್ರಗ್ ಪೆಡ್ಲರ್ ಆಗಿರುವ ಆರೋಪಿಯ ಬಳಿ ನಗದು ಹಣ ಮತ್ತು ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್, ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಈ ಕುರಿತು ಪ್ರಕರಣದ ತನಿಖೆಯನ್ನು ಮುಂದುವರಿಸಿದ ಸಿಸಿಬಿ ಪೊಲೀಸರು ತನಿಖಾಧಿಕಾರಿಗಳಿಗಿರುವ ಪ್ರದತ್ತ ಅಧಿಕಾರವನ್ನು ಬಳಸಿ ಆರೋಪಿಯ ಪತ್ನಿಯ ಎರಡು ಬ್ಯಾಂಕ್ ಖಾತೆಯಿಂದ 2.55 ಲಕ್ಷ ರೂ. ಇತರ ಹೆಸರಿನಲ್ಲಿದ್ದ 5 ಬ್ಯಾಂಕ್ ಖಾತೆಗಳಲ್ಲಿದ್ದ 4.90 ಲಕ್ಷ ಸೇರಿ 7 ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12.60 ಲಕ್ಷ ರೂ. ಹಣವನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಂತರ ಈ ಆದೇಶವನ್ನು ಎನ್.ಡಿ.ಪಿಎಸ್ ಕಾಯ್ದೆ 5(ಎ), ಕಲಂ 68 (ಎಫ್) (2)ರಡಿ ಈ ಮುಟ್ಟುಗೋಲು ಆದೇಶ ಅನುಮೋದಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.