ಬೆಂಗಳೂರು : ಪೊಲೀಸರ ಕಾರ್ಯವೈಖರಿಯಲ್ಲಿ ಸುಧಾರಣೆ ತರಲು ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ಸೃಷ್ಟಿಸಲು ದಿಟ್ಟ ಹೆಜ್ಜೆ ಇಟ್ಟಿರುವ ನಗರ ಪೊಲೀಸ್ ಇಲಾಖೆ ರಾಜಧಾನಿಯಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಿಗೆ ಆಡಿಯೊ ಬರುವ ಹಾಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.
ಜನಸ್ನೇಹಿ ವಾತಾವರಣ ನಿರ್ಮಾಣ ಹಾಗೂ ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು ಇಲಾಖೆಯು ಮುಂದಾಗಿದ್ದು, ಈ ನಿಟ್ಟಿನಲ್ಲಿ ನಗರದ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮರಾ ಅಳವಡಿಸಿದೆ. ಕ್ಯಾಮರಾ ಕೇವಲ ವಿಡಿಯೋ ಮಾತ್ರ ಸೆರೆ ಹಿಡಿಯಲಿದೆ. ಠಾಣೆಗೆ ಬರುವ ದೂರುದಾರರು ತಡವಾಗಿ ದೂರು ಸ್ವೀಕಾರ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸದಿರುವುದು ಸೇರಿ ಕೆಲ ಗಂಭೀರ ಆರೋಪಗಳನ್ನ ಪೊಲೀಸರ ಮೇಲೆ ಹೊರಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದುಂಟು. ಹೀಗಾಗಿ ನೊಂದವರಿಗೆ ತ್ವರಿತಗತಿಯಲ್ಲಿ ನ್ಯಾಯ ಕಲ್ಪಿಸಲು ಹಾಗೂ ದಕ್ಷತೆ ತೋರದ ಪೊಲೀಸರ ನಡವಳಿಕೆಯಲ್ಲಿ ಸುಧಾರಣೆ ತರಲು ಸಿಸಿಟಿವಿ ಕ್ಯಾಮರ ಜೊತೆ ಇನ್ನು ಮುಂದೆ ಆಡಿಯೋ ಬರುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ತಿಳಿದು ಬಂದಿದೆ.
ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ, ಟ್ರಾಫಿಕ್, ಸೆನ್ ಹಾಗೂ ಮಹಿಳಾ ಠಾಣೆಗಳು ಸೇರಿದಂತೆ ಒಟ್ಟು 170 ಪೊಲೀಸ್ ಠಾಣೆಗಳಿವೆ. ಸುಪ್ರೀಂಕೋರ್ಟ್ ಆದೇಶದಂತೆ ಕಾನೂನು ಸುವ್ಯವಸ್ಥೆ ಠಾಣೆಗಳಲ್ಲಿ ಬರುವ 111 ಠಾಣೆಗಳಲ್ಲಿ 487 ಹಾಗೂ ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ 176 ಸೇರಿದಂತೆ ಒಟ್ಟು 656 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಕ್ಯಾಮರಾ ಅಳವಡಿಕೆಗೆ ಗುತ್ತಿಗೆ ನೀಡಲಾಗಿದ್ದ ಖಾಸಗಿ ಸಂಸ್ಥೆಯೊಂದಿಗೆ ವಿಡಿಯೊ ಜೊತೆ ಆಡಿಯೊ ಬರುವ ಹಾಗೆ ಯಾವ ರೀತಿ ಅನುಷ್ಠಾನ ತರಬಹುದು ಎಂಬುದರ ಬಗ್ಗೆ ಇಲಾಖೆ ಮಾತುಕತೆ ನಡೆಸುತ್ತಿದೆ. ಯೋಜನೆ ಇನ್ನೂ ಶೈವಾವಸ್ಥೆಯಲ್ಲಿದ್ದು, ಮಾತುಕತೆ ಪೂರ್ಣಗೊಂಡ ಬಳಿಕ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಆಡಳಿತದಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಲಿದೆಯಾ ಈ ಯೋಜನೆ: ಪೊಲೀಸರ ಅಶಿಸ್ತಿಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರು ಪೊಲೀಸರ ಮೇಲೆ ಹೊರಿಸುವ ಇಲ್ಲಸಲ್ಲದ ಆರೋಪಗಳಿಗೆ ಮುಕ್ತಿ ಕಾಣಿಸಲು ಆಡಿಯೊ ಆಧಾರಿತ ವ್ಯವಸ್ಥೆ ಸಹಕಾರಿಯಾಗಲಿದೆ. ನ್ಯಾಯ ಅರಸಿ ಬರುವ ದೂರುದಾರರೊಂದಿಗೆ ಪೊಲೀಸರು ಸಂಯಮದಿಂದ ವರ್ತಿಸದಿರುವುದು, ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುವುದು ಹಾಗೂ ಅಶಿಸ್ತು ಸೇರಿದಂತೆ ಇನ್ನಿತರ ಆರೋಪಗಳ ಬಗ್ಗೆ ಈ ಹಿಂದೆ ವರದಿಯಾಗಿದ್ದವು.
ಅಲ್ಲದೇ ಕೆಲ ಸಂದರ್ಭಗಳಲ್ಲಿ ಸಾರ್ವಜನಿಕರು ಸಹ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದನ್ನು ನಿಯಂತ್ರಿಸಲು ಠಾಣೆಗಳಲ್ಲಿ ವಿಡಿಯೋ ಆಧಾರಿತ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ನಿಂದನೆ, ಭ್ರಷ್ಟಾಚಾರ ಆಪಾದನೆಗಳು ಪೊಲೀಸರ ವಿರುದ್ಧ ಬಂದಾಗ ಕಣ್ಣು ಮುಂದೆ ವಿಡಿಯೋ ಇದ್ದರೂ ಪೂರ್ಣ ಪ್ರಮಾಣದಲ್ಲಿ ಆರೋಪದ ಸತ್ಯಾಸತ್ಯತೆ ಗೊತ್ತಾಗುತ್ತಿರಲಿಲ್ಲ. ಇದೀಗ ಸಾರ್ವಜನಿಕರೊಂದಿಗೆ ನಡೆಸುವ ಸಂಭಾಷಣೆ ದಾಖಲು ಮಾಡಿಕೊಂಡರೆ ತಪ್ಪಿತಸ್ಥರ ಪತ್ತೆ ಸುಲಭವಾಗಲಿದೆ. ನೋಡಲ್ ಅಧಿಕಾರಿಯಾಗಿ ಎಸಿಪಿ ವಹಿಸಿಕೊಂಡರೆ ಆಯಾ ವಿಭಾಗದ ಡಿಸಿಪಿ ಇದರ ಯೋಜನೆಯ ಉಸ್ತುವಾರಿಯಾಗಿರಲಿದ್ದಾರೆ. ವಿಡಿಯೋ ಜತೆ ಆಡಿಯೋ ರೆಕಾರ್ಡ್ ಒಂದು ವರ್ಷದವರೆಗೂ ಇರುವ ಬಗ್ಗೆ ಕ್ರಮ ಕೈಗೊಳ್ಳಲು ಇಲಾಖೆಯು ಹೆಜ್ಜೆ ಇರಿಸಿದೆ.
ಪೊಲೀಸ್ ಠಾಣೆಗಳಲ್ಲಿ 656 ಕ್ಯಾಮರಾ ಅಳವಡಿಕೆ: ಸಿಬಿಐ, ಇಡಿ, ಸೇರಿದಂತೆ ಬಂಧಿಸಿ ತನಿಖೆ ನಡೆಸುವ ಅಧಿಕಾರ ಹೊಂದಿರುವ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು 2020ರಲ್ಲಿ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಇದರಂತೆ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯದಲ್ಲಿರುವ 1,054 ಪೊಲೀಸ್ ಠಾಣೆಗಳಲ್ಲಿ 4,126 ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಾರ್ಯ ಕಳೆದ ವರ್ಷವೇ ಪೂರ್ಣಗೊಂಡಿದೆ. ಈ ಪೈಕಿ ನಗರದಲ್ಲಿ ಬರುವ ಪೊಲೀಸ್ ಠಾಣೆಗಳಲ್ಲಿ 656 ಕ್ಯಾಮರಾ ಅಳವಡಿಸಿದೆ. ಠಾಣೆಯ ಸ್ವಾಗತ ವಿಭಾಗ, ಠಾಣೆ ಮುಂದೆ, ವಿರುದ್ಧ ದಿಕ್ಕು ಹಾಗೂ ಠಾಣೆಯೊಳಗೆ ಸೇರಿದಂತೆ ನಾಲ್ಕು ಕ್ಯಾಮರಾ ಅಳವಡಿಕೆಯಾಗಿದೆ.
ಇದನ್ನೂ ಓದಿ:ಪ್ರತಿ ಮನೆಗೂ ಸಿಸಿಟಿವಿ ಕ್ಯಾಮೆರಾ: ಲಕ್ನೋ ಪೊಲೀಸರ ಹೊಸ ಅಭಿಯಾನ