ಬೆಂಗಳೂರು: ಪೊಲೀಸ್ ಧ್ವಜ ದಿನಾಚರಣೆ ಹಿನ್ನೆಲೆ ಭಾನುವಾರ ಕೋರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಪೊಲೀಸ್ ಕವಾಯತು ನಡೆಯಿತು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಾಂಪ್ರದಾಯಿಕವಾಗಿ ನೀಡಬೇಕಿದ್ದ ಮುಖ್ಯಮಂತ್ರಿ ಪದಕ ವಿತರಣೆ ಕಾರ್ಯಕ್ರಮ ಮುಂದೂಡಲಾಗಿದೆ. ಮುಖ್ಯ ಅಥಿತಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪೊಲೀಸ್ ಇಲಾಖೆ ವಿವಿಧ ತುಕಡಿಗಳ ಮೂಲಕ ಗೌರವ ವಂದನೆ ಸೂಚಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಂದಿತಾ ಶರ್ಮಾ ಅವರು, ರಾಜ್ಯ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತುಂಬಾ ಶ್ರಮಿಸುತ್ತಿದೆ. ಪೊಲೀಸರ ಅವಿರತ ಶ್ರಮದಿಂದ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಕೋವಿಡ್ ಪರಿಸ್ಥಿತಿ ವೇಳೆ ಎಲ್ಲಾ ಅಧಿಕಾರಿಗಳು ತಮ್ಮ ಪ್ರಾಣ ಲೆಕ್ಕಿಸದೇ ಕೆಲಸ ನಿರ್ವಹಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಚುನಾವಣೆಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಅಧಿಕಾರಿಗಳು ಕೆಲಸ ನಿರ್ವಹಿಸುವ ನಂಬಿಕೆ ಇದೆ. ಒಟ್ಟಾಗಿ ನಾವು ನೀವು ಕೆಲಸ ಮಾಡೋಣ ಎಂದರು.
ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳು, ಮುಖ್ಯ ಅತಿಥಿಯಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿಯಾಗಿದ್ದರು.
ಪೊಲೀಸರು ಸಮಾಜದ ಆಧಾರ ಸ್ತಂಭ ಇದ್ದಂತೆ - ಹೆಚ್ ಎಸ್ ರಮೇಶ್:ಮಂಡ್ಯದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಧ್ವಜಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಎಸ್. ರಮೇಶ್ ಅವೆರು ಇದೇ ವೇಳೆ ಪೊಲೀಸ್ ಧ್ವಜದ ಸ್ಟಿಕರ್ ಬಿಡುಗಡೆ ಮಾಡಿ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪರಿವೀಕ್ಷಣೆ ನಡೆಸಿದರು.