ಕರ್ನಾಟಕ

karnataka

By

Published : May 12, 2021, 10:23 AM IST

ETV Bharat / state

ಶರಣಾಗಲು ಸೂಚಿಸಿದರೂ ಹಲ್ಲೆಗೆ ಮುಂದಾದ ರೌಡಿಶೀಟರ್​ ಕಾಲಿಗೆ ಗುಂಡೇಟು

ಶರಣಾಗುವಂತೆ ಸೂಚಿಸಿದರೂ ಹಲ್ಲೆಗೆ ಮುಂದಾಗಿದ್ದ ರೌಡಿಶೀಟರ್ ಕಾಲಿಗೆ ಗುಂಡಿಕ್ಕಿದ ಪೊಲೀಸರು ಆತನನ್ನು ಬಂಧಿಸಿದರು.

police-firing-on-rowdy-sheeter-in-bengaluru
ರೌಡಿಶೀಟರ್​ ಕಾಲಿಗೆ ಗುಂಡೇಟು

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ರೌಡಿಶೀಟರ್ ಸೂರ್ಯ ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ವೇಳೆ ಹೆಡ್ ಕಾನ್ಸ್​​ಟೇಬಲ್​ ಹನುಮೇಶ್ ಗಾಯಗೊಂಡಿದ್ದಾರೆ‌. ರೌಡಿಶೀಟರ್ ವಿರುದ್ಧ 2015 ಹಾಗೂ 2016ರಲ್ಲಿ ರಾಮಮೂರ್ತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಗಳು, ಕೆ.ಜಿ.ಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಜೈಲಿಗೆ ಹೋಗಿ ಬಂದರೂ ಈತ ಅಪರಾಧ ಕಾಯಕ ಮುಂದುವರೆಸಿದ್ದ.

ಇತ್ತೀಚೆಗೆ ರಘುರಾಮ್ ಎಂಬುವರ ಮೇಲೆ ಸೂರ್ಯನ ಗ್ಯಾಂಗ್ ಹಲ್ಲೆ ನಡೆಸಿತ್ತು‌‌. ನಗರದ ಪೂರ್ವ ವಿಭಾಗದಲ್ಲಿ ಉಪಟಳ ಹೆಚ್ಚಾಗುತ್ತಿದ್ದಂತೆ ಆರೋಪಿ ಸೂರ್ಯನನ್ನು ಬಂಧಿಸಲು ಸಿಸಿಬಿ ಸಂಘಟಿತ ಅಪರಾಧ ವಿಭಾಗವು ಎಸಿಪಿ ಹೆಚ್.ಎಸ್.ಪರಮೇಶ್ವರ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾಗಿತ್ತು. ಕಮ್ಮನಹಳ್ಳಿ ಮನೆಯೊಂದರಲ್ಲಿ ಸೂರ್ಯ ಹಾಗೂ ಸಹಚರರು ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಗಿರೀಶ್, ಕಿರಣ್, ಅಜಿತ್ ಕುಮಾರ್, ಪ್ರವೀಣ್ ಹಾಗೂ ರಾಹುಲ್ ಎಂಬುವರನ್ನು ಬಂಧಿಸಿದ್ದಾರೆ. ಈ ವೇಳೆ ಸೂರ್ಯ ಪರಾರಿಯಾಗಿದ್ದ.

ನಿನ್ನೆ ಹೆಚ್​ಬಿಆರ್ ಲೇಔಟ್ ಬಳಿ ಸೂರ್ಯ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಮತ್ತೊಂದು ಕಾರ್ಯಾಚರಣೆ ನಡೆಸಿದಾಗ ಪೊಲೀಸರನ್ನು ಕಂಡು ಸೂರ್ಯ ಓಡಿ ಹೋಗಲು ಮುಂದಾಗಿದ್ದಾನೆ. ಸಮೀಪದ ತೋಪಿನ ಬಳಿ ಹಿಡಿಯಲು ಹೋದ ಹೆಡ್ ಕಾನ್ಸ್​ಟೇಬಲ್ ಹನುಮೇಶ್​​ ಮೇಲೆ ಡ್ರ್ಯಾಗರ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಮುಂದಾಗಿದ್ದ. ಶರಣಾಗುವಂತೆ ಸೂಚಿಸಿದರೂ ಹಲ್ಲೆಗೆ ಮುಂದಾಗಿದ್ದ ಸೂರ್ಯನ ಕಾಲಿಗೆ ಗುಂಡು ಹೊಡೆದು ಬಂಧಿಸಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸೋನು ಸೂದ್, ಸಲ್ಮಾನ್​ಖಾನ್​ರನ್ನು ಭಾರತದ ಪ್ರಧಾನಿಯಾಗಿ ನೋಡಬೇಕು: ರಾಖಿ ಸಾವಂತ್

ABOUT THE AUTHOR

...view details