ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜಿಟಿ ಜಿಟಿ ಮಳೆ ಮಧ್ಯೆ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ನವೆಂಬರ್ 24ರಂದು ದಿನೇಶ್ ಅಲಿಯಾಸ್ ದಿನಿ ತಂಡ ದ್ವಾರಕನಗರ ಬಳಿ ಹೋಗುತ್ತಿದ್ದ ಮ್ಯಾಥಿವ್ಸ್ ನನ್ನ ಅಡ್ಡಗಟ್ಟಿದ್ದರು. ಬಳಿಕ ಮ್ಯಾಥಿವ್ಸ್ನನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿ ಚಾಕು ತೋರಿಸಿ 3 ಲಕ್ಷ ಬೆಲೆಬಾಳುವ ಕ್ಯಾಮರಾ ಮತ್ತು ಮೊಬೈಲ್ ಕಿತ್ತುಕೊಂಡಿದ್ದರು.
ಇದನ್ನೂ ಓದಿ:ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ಗೆ ಇಂದಿನಿಂದ ಮೂರು ದಿನ ಸಿಬಿಐ ಡ್ರಿಲ್
ಈ ಘಟನೆ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಆರೋಪಿಗಳು ಇರುವ ಮಾಹಿತಿ ಪಡೆದ ಪೊಲೀಸರು ದಿನಿಯನ್ನು ಬಂಧಿಸಲು ತೆರಳಿದ್ದರು. ಆರೋಪಿ ಹಿಡಿಯಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ದಿನಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ದಿನಿ ಕಾಲಿಗೆ ಬಾಗಲೂರು ಇನ್ಸ್ ಪೆಕ್ಟರ್ ಪ್ರಶಾಂತ್ ವರಣಿ ಫೈರಿಂಗ್ ಮಾಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ಪಕ್ಕದ ಮನೆಯವರ ಜಗಳ ಬಿಡಿಸಲು ಹೋಗಿ ತಾನೇ ಪರಲೋಕ ಸೇರಿದ ಮಹಿಳೆ!
ಮೂಲತಃ ತಮಿಳುನಾಡಿನ ದಿನೇಶ್ ಬೆಂಗಳೂರಿನ ಅಂಬೇಡ್ಕರ್ ನಗರದಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಬಾಗಲೂರು ಠಾಣೆ ಪಿಎಸ್ಐ ವಿಂದ್ಯಾ, ಕಾನ್ಸ್ಟೇಬಲ್ ಸುಮಂದ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ನಗರದಲ್ಲಿ ಹಲವಾರು ಠಾಣೆಗಳಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಸದ್ಯ ತನಿಖೆ ಮುಂದುವರೆದಿದೆ.