ಬೆಂಗಳೂರು: ಕೆಲ ತಿಂಗಳ ಹಿಂದೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಆರೋಪದಡಿ ಜೈಲು ಸೇರಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಆಟೋ ಚಾಲಕನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು. ಇದೀಗ ಬೆಂಗಳೂರು ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಇಂದಿರಾನಗರ ಪೊಲೀಸರು ತಪ್ಪಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಕವಿರಾಜ್ ಹಾಗೂ ಅಂಬರೀಶ್ ಗುಂಡೇಟು ತಿಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲೆ, ಅಪಹರಣ ಆರೋಪಿಗಳ ಕಾಲಿಗೆ ಪೊಲೀಸರ ಗುಂಡೇಟು ಕಳೆದ ವರ್ಷ ನ.25ರಂದು ಕೋಲಾರದ ತಮ್ಮ ಫಾರ್ಮ್ ಹೌಸ್ ಬಳಿ ಕಾರಿನಲ್ಲಿ ಬರುವಾಗ ಆರೋಪಿ ಕವಿರಾಜ್ ನೇತೃತ್ವದ ತಂಡ ಕಾರು ಅಡ್ಡಗಟ್ಟಿ ವರ್ತೂರು ಪ್ರಕಾಶ್ ಹಾಗೂ ಚಾಲಕನ ಅಪಹರಿಸಿ 30 ಕೋಟಿಗೆ ಬೇಡಿಕೆ ಇಟ್ಟಿದ್ದರು. ಮೂರು ದಿನಗಳ ಬಳಿಕ ಕಾರಿನಲ್ಲಿ ಸುತ್ತಾಡಿಸಿ 48 ಲಕ್ಷ ರೂಪಾಯಿ ವಸೂಲಿ ಮಾಡಿದ್ದರು.
ಬಳಿಕ ವರ್ತೂರ್ ಪ್ರಕಾಶ್ ಅಪಹರಣಕಾರರ ಕಪಿಮುಷ್ಠಿಯಿಂದ ಪಾರಾಗಿದ್ದರು. ಈ ಸಂಬಂಧ ಕೋಲಾರ ಪೊಲೀಸರು ಪ್ರಕರಣ ದಾಖಲಿಸಿ ಕವಿರಾಜ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.
ಜೈಲಿನಿಂದ ಹೊರಬಂದು ಆಟೋ ಚಾಲಕನ ಕಿಡ್ನಾಪ್
ಜಾಮೀನಿನ ಮೇಲೆ ಹೊರಬಂದ ಆರೋಪಿ ಕವಿರಾಜ್ ಹಾಗೂ ಅಂಬರೀಶ್ ಇನ್ನಿತರ ಆರೋಪಿಗಳು ಹಣಕ್ಕಾಗಿ ಕಿಡ್ನಾಪ್ ಮಾಡಲು ಸಂಚು ರೂಪಿಸಿದ್ದರು. ಇಂದಿರಾನಗರ ನಿವಾಸಿಯಾಗಿರುವ ಆಟೋ ಚಾಲಕ ವಿಜಯ್ ಕುಮಾರ್ ಎಂಬಾತನನ್ನು ಜು.5 ರಂದು ಅಪಹರಿಸಿದ್ದಾರೆ. ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ. ಹಣ ತಲುಪಿಸುವುದು ತಡವಾಗಿದ್ದರಿಂದ ಆರೋಪಿಗಳು ಹೊಸೂರು ಬಳಿ ಬರ್ಬರವಾಗಿ ಹತ್ಯೆ ಮಾಡಿ ಹೂತು ಹಾಕಿದ್ದಾರೆ.
ತನಿಖೆ ನಡೆಸಿದಾಗ ಕವಿರಾಜ್ ಗ್ಯಾಂಗ್ ಅಪಹರಿಸಿವುದು ತಿಳಿದು ಬಂದಿದೆ. ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರಿಗೆ ಇಂದು ಬೆಳಗ್ಗೆ ಬೈಯ್ಯಪ್ಪನಹಳ್ಳಿ ಬಳಿ ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಹಲಸೂರು ಉಪವಿಭಾಗದ ಎಸಿಪಿ ಕುಮಾರ್, ಇಂದಿರಾನಗರ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಬಂಧಿಸಲು ಮುಂದಾದಾಗ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವುದಾಗಿ ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.