ಬೆಂಗಳೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ನನ್ನು ಮಹಜರಿಗೆ ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ವೇಳೆ ಕಾಲಿಗೆ ಗುಂಡು ಹಾರಿಸಿ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಕೆಜಿಹಳ್ಳಿಯ ರೌಡಿಶೀಟರ್ ಸ್ಟಾಲಿನ್ ಗುಂಡೇಟಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಹೆಡ್ ಕಾನ್ಸ್ಟೇಬಲ್ ಮಹೇಶ್ ಗಾಯಗೊಂಡಿದ್ದಾರೆ.
ಸೆ.12ರಂದು ಬೆಂಗಳೂರಿಗರನ್ನ ಬೆಚ್ಚಿ ಬೀಳಿಸಿದ್ದ ಹತ್ಯೆ :ಸೆ.12ರಂದು ಹತ್ಯೆಯಾದವನು ಯಾರು ಎಂಬುದನ್ನು ಪತ್ತೆ ಹಚ್ಚುವುದಕ್ಕೂ ಪೊಲೀಸರು ಹರಸಾಹಸ ಪಟ್ಟಿದ್ದರು. ಅಷ್ಟರಮಟ್ಟಿಗೆ ಮುಖದ ಗುರುತು ಸಹ ಸಿಗದಂತೆ ಕೆಜಿಹಳ್ಳಿ ಠಾಣೆಯ ರೌಡಿಶೀಟರ್ ಅರವಿಂದ್ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಹೆಣವಾಗಿದ್ದ.
ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು.. ಘಟನೆ ಸಂಬಂಧ ಪ್ರಕರಣದಲ್ಲಿ ಆರೋಪಿಗಳಾದ ಸ್ಟಾಲಿನ್, ಅರುಣ್, ವಿಜಯ್ ಕುಮಾರ್ ಹಾಗೂ ಜಾಕ್ ಲೂಯಿಸ್ ಎಂಬ ನಾಲ್ವರನ್ನ ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದರು. ಇಂದು ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಸ್ಟಾಲಿನ್ ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಅಸಲಿ ಕಾರಣ ಬಿಚ್ಚಿಟ್ಟ ಆರೋಪಿಗಳು :ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ. ಅಸಲಿಗೆ ಎಲ್ಲರೂ ಕೆಜಿಹಳ್ಳಿ ವ್ಯಾಪ್ತಿಯವರೇ.. ಏರಿಯಾದಲ್ಲಿ 7 ಕೊಲೆಯತ್ನ ಸಹಿತ 13 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮೃತ ಅರವಿಂದ್ನ ಕಾಟಕ್ಕೆ ಬಂಧಿತ ಆರೋಪಿಗಳೆಲ್ಲರೂ ಬೇಸತ್ತಿದ್ದರಂತೆ.
ಆರೋಪಿಗಳ ಪೈಕಿ ಸ್ಟಾಲಿನ್ ತಮ್ಮ ಸುಭಾಷ್ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಅರವಿಂದ್, ಅರುಣ್ ಹಾಗೂ ವಿಜಯ್ಎಂಬುವರಿಗೂ ಸಹ ಹಲ್ಲೆ ಮಾಡಿದ್ದನಂತೆ. ಜಾಕ್ ಲೂಯಿಸ್ ತಮ್ಮನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದಲ್ಲದೆ, ಲೂಯಿಸ್ ಮನೆಗೆ ನುಗ್ಗಿ ಆತನ ಪತ್ನಿಯ ಜೊತೆಗೂ ಅಸಭ್ಯವಾಗಿ ನಡೆದುಕೊಂಡಿದ್ದನಂತೆ. ಈ ಕಾರಣದಿಂದಲೇ ಲೂಯಿಸ್ ಏರಿಯಾನೆ ಬಿಟ್ಟು ಆಡುಗೋಡಿಗೆ ಬಂದು ಮನೆ ಮಾಡಿಕೊಂಡಿದ್ದ.
ಯಾವಾಗಲು ಹುಡುಗರ ಜೊತೆ ಇರುತ್ತಿದ್ದ ಅರವಿಂದ್:ಅಂದಿನಿಂದಲೂ ನಾಲ್ವರಲ್ಲೂ ಅರವಿಂದ್ ವಿರುದ್ಧ ಹಗೆತನ ಮನೆ ಮಾಡಿತ್ತು. ಆದರೆ, ಸದಾಕಾಲ ಕನಿಷ್ಠ 20 ಹುಡುಗರ ಜೊತೆ ತಿರುಗ್ತಿದ್ದ ಅರವಿಂದ್‌ನನ್ನ ಮುಗಿಸೋದಿರ್ಲಿ ಮುಟ್ಟುವುದು ಸಹ ಕಷ್ಟವಾಗಿತ್ತು. ಈ ನಡುವೆ ಅಪರಾಧ ಚಟುವಟಿಕೆ ಬಿಟ್ಟು ಫುಟ್‌ಬಾಲ್ ತಂಡದ ಮ್ಯಾನೇಜರ್ ಆಗಿದ್ದೀನಿ ಎಂದು ಓಡಾಡಿಕೊಂಡಿದ್ದ ಅರವಿಂದ್, ಸೆ.13ರಂದು ಅಶೋಕನಗರದ ಬಿಬಿಎಂಪಿ ಮೈದಾನದಲ್ಲಿ ಮ್ಯಾಚ್ಗೆ ಬಂದಿದ್ದಾಗಿ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿದ್ದ.
ವಿಷಯ ಗೊತ್ತಾಗ್ತಿದ್ದ ಹಾಗೆ ಜಾಗೃತವಾಗಿದ್ದ ಸ್ಟಾಲಿನ್, ಸಹಚರ ಜಾಕ್‌ನನ್ನ ಗ್ರೌಂಡ್ ಬಳಿ ಕಳಿಸಿ ಮಾಹಿತಿ ಪಡೆದುಕೊಂಡ ಬಳಿಕ ಅರುಣ್, ವಿಜಯ್ ಕುಮಾರ್ ಜೊತೆ ಹೆಲ್ಮೆಟ್ ಧರಿಸಿ ಗ್ರೌಂಡ್ ಬಳಿ ಬಂದಿದ್ದ.
ಪಂದ್ಯ ಮುಗಿಸಿ ಬರುತ್ತಿದ್ದಂತೆ ಅರವಿಂದ್‌ನನ್ನ ಅಟ್ಟಾಡಿಸಿದ್ದ ಆರೋಪಿಗಳು ಕೊನೆಗೆ ಫುಟ್ಬಾಲ್ ಅಸೋಸಿಯೇಷನ್ ಕಟ್ಟಡದ ರೆಫ್ರಿ ಕೊಠಡಿಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಸದ್ಯ ಗಾಯಾಳು ಹೆಡ್ ಕಾನ್ಸ್ಟೇಬಲ್ ರಾಜೇಶ್ ಹಾಗೂ ಗುಂಡೇಟು ತಿಂದ ಸ್ಟಾಲಿನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.