ಮಹಿಳಾ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಬೆಂಗಳೂರು:ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಹಿರಿಯ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕುರಿತು ನಗರ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ಮಾತನಾಡಿ,"ಬಂಧಿತ ಆರೋಪಿಯಾಗಿರುವ ಕಿರಣ್, ಕಳೆದ ನಾಲ್ಕು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ವೃತ್ತಿಯಲ್ಲಿ ಅಶಿಸ್ತು ಹಾಗೂ ದುರ್ವರ್ತನೆ ತೋರಿದ ಹಿನ್ನೆಲೆ ಎರಡು ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕಿರಣ್ ಮನವಿ ಮಾಡಿದ್ದ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಮಾರನ್ನು ಅವರ ಮನೆಯಲ್ಲಿ ಹತ್ಯೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ" ಎಂದು ತಿಳಿಸಿದ್ದಾರೆ.
"ದೊಡ್ಡಕಲ್ಲಸಂದ್ರದ ಗೋಕುಲ ಬಡಾವಣೆಯಲ್ಲಿ ವಾಸವಾಗಿದ್ದ ಪ್ರತಿಮಾ ಅವರ ಮೃತದೇಹ ನವೆಂಬರ್ 4 ರಂದು ವೇಲಿನಿಂದ ಕುತ್ತಿಗೆಗೆ ಬಿಗಿದು ಬಳಿಕ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರತಿಮಾ ಸಹೋದರ ಪ್ರತೀಶ್ ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ಬಂಧನಕ್ಕಾಗಿ ಮೂರು ವಿಶೇಷ ತಂಡ ರಚಿಸಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ಪ್ರತಿಮಾ ಅವರ ಸಂಪರ್ಕದಲ್ಲಿದ್ದವರ ಬಳಿ ಮಾಹಿತಿ ಕಲೆ ಹಾಕಲಾಗಿತ್ತು. ಒಂಟಿಯಾಗಿ ವಾಸ ಮಾಡುತ್ತಿದ್ದ ಅವರ ಮನೆಗೆ ಅಪರಿಚಿತ ವ್ಯಕ್ತಿಗಳು ಬಂದು ಹೋಗಿರುವ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಿದಾಗ ನ.5ರಂದು ಪ್ರತಿಮಾ ಅವರ ಕಿರಣ್ ಮನೆಗೆ ಬಂದಿರುವುದು ಗೊತ್ತಾಗಿತ್ತು" ಎಂದು ಹೇಳಿದರು.
"ಮನೆ ಸಮೀಪ ಅಳವಡಿಸಿದ್ದ ಸಿಸಿಟಿವಿಯಲ್ಲಿ ಆರೋಪಿ ಬಂದಿರುವುದು ಸೆರೆಯಾಗಿತ್ತು. ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿಯು ಕೃತ್ಯವೆಸಗಿ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಬಳಿ ಅವಿತುಕೊಂಡಿರುವುದು ಬೆಳಕಿಗೆ ಬಂದಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು ನಿನ್ನೆ(ಭಾನುವಾರ) ರಾತ್ರಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆ ತಂದಿದ್ದರು. ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆ ಆತನನ್ನು ಬಂಧಿಸಲಾಗಿತ್ತು" ಎಂದು ಮಾಹಿತಿ ನೀಡಿದ್ದಾರೆ.
ವಿವಿಧ ಆಯಾಮಗಳಲ್ಲಿ ಕೊಲೆ ಪ್ರಕರಣದ ತನಿಖೆ: "ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇದುವರೆಗಿನ ತನಿಖೆಯಲ್ಲಿ ಚಾಲಕನ ಹುದ್ದೆಯಿಂದ ತೆಗೆದುಹಾಕಿದ್ದರಿಂದಲೇ ಆರೋಪಿಯು ಈ ಕೃತ್ಯ ಎಸಗಲು ಕಾರಣ ಅಂತಾ ತಿಳಿದುಬಂದಿದೆ. ಆದರೂ ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಗಣಿ ಮಾಫಿಯಾ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಅಲ್ಲದೆ ಆರೋಪಿತನ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಚಾರಣೆಗೊಳಪಡಿಸಲಾಗುವುದು" ಎಂದು ಡಿಸಿಪಿ ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆರೋಪಿ:ಕೆಲ ವರ್ಷಗಳ ಹಿಂದಷ್ಟೇ ಕಿರಣ್ಗೆ ಮದುವೆಯಾಗಿತ್ತು. ಜಂಬುಸವಾರಿ ದಿಣ್ಣೆಯಲ್ಲಿ ವಾಸವಾಗಿದ್ದ. ಈತನ ತಂದೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಲ್ಲಿ ಚಾಲಕರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಮಗ ಕಿರಣ್ ಸಹ ಎಂಟು ವರ್ಷಗಳಿಂದ ಇದೇ ಇಲಾಖೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಪ್ರತಿಮಾ ಅವರಿಗೆ ಕಾರು ಚಾಲಕನಾಗಿದ್ದ. ಕೆಲಸದ ಅವಧಿಯಲ್ಲಿ ಕಾರು ಅಪಘಾತವೆಸಗಿದ್ದ. ಅಲ್ಲದೆ ಅಶಿಸ್ತು ತೋರಿದ್ದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿತ್ತು. ಕೆಲಸ ಕಳೆದುಕೊಂಡಿದ್ದರಿಂದ ಮನೆಯಲ್ಲಿ ಹಣಕಾಸು ಮುಗ್ಗಟ್ಟು ಉಂಟಾಗಿತ್ತು. ಪತ್ನಿ ಗರ್ಭೀಣಿಯಾಗಿದ್ದರಿಂದ ಖರ್ಚುವೆಚ್ಚ ಸರಿದೂಗಿಸುವುದು ಕಷ್ಟವಾಗಿತ್ತು. ವೈಮನಸ್ಸು ಉಂಟಾಗಿ ಪತ್ನಿ ತವರು ಮನೆಗೆ ಸೇರಿದ್ದಳು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಮತ್ತೆ ಕೆಲಸ ಗಿಟ್ಟಿಸಿಕೊಳ್ಳಲು ನಿರ್ಧರಿಸಿದ್ದ ಕಿರಣ್, ಇದೇ ತಿಂಗಳು 3 ರಂದು ಪ್ರತಿಮಾ ಅವರನ್ನು ಭೇಟಿಯಾಗಲು ಮನೆ ಬಳಿ ಬಂದಿದ್ದ. ಅಂದು ಪ್ರತಿಮಾ ಸಿಗದಿದ್ದರಿಂದ ನ.4ರಂದು ಮತ್ತೆ ಮನೆ ಬಳಿ ಹೋಗಿದ್ದ.
ಕೆಲಸಕ್ಕಾಗಿ ಮನವಿ ಮಾಡಿದ್ದ ಆರೋಪಿ:ಮನೆಗೆ ಪ್ರತಿಮಾ ಬರುತ್ತಿದ್ದಂತೆ ಭೇಟಿಯಾದ ಕಿರಣ್, ತಮ್ಮ ತಪ್ಪನ್ನು ಮನ್ನಿಸಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದ. ಇದಕ್ಕೆ ಸ್ಪಂದಿಸದೆ ಪ್ರತಿಮಾ ಮನೆಯೊಳಗೆ ಹೋಗಿದ್ದರು. ಪಟ್ಟು ಹಿಡಿದು ಹಿಂಬಾಲಿಸಿಕೊಂಡೇ ಮನೆಯೊಳಗೆ ಪ್ರವೇಶಿಸಿ ಮತ್ತೆ ಮನವಿ ಮಾಡಿಕೊಂಡಿದ್ದ. ಆದರೆ ಪ್ರತಿಮಾ ನಿರಾಕರಿಸಿದ್ದು, ಆಗ ಕೋಪಗೊಂಡು ವೇಲಿನಿಂದ ಕುತ್ತಿಗೆ ಬಿಗಿದು ನಂತರ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಆಕೆ ಬಳಿಯಿದ್ದ ಸುಮಾರು 10 ಸಾವಿರ ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾನೆ. ನಂತರ ಸ್ನೇಹಿತನ ಬೈಕ್ನಲ್ಲಿ ಮಲೆ ಮಹದೇಶ್ವರಬೆಟ್ಟಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕನ ಬಂಧನ