ಬೆಂಗಳೂರು: ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ನಗರದಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣ ಬಲಪಡಿಸಲು ಟ್ರಾಫಿಕ್ ಹಾಗೂ ಹೊಯ್ಸಳ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ಬಾಡಿವೋರ್ನ್ ಕ್ಯಾಮರಾವನ್ನು ಇನ್ನು ಮುಂದೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ಗಳಿಗೂ ನೀಡಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದೆ. ನಗರದಲ್ಲಿರುವ 111 ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ತಲಾ ಒಂದು ಬಾಡಿವೋರ್ನ್ ಕ್ಯಾಮರಾವನ್ನು ಸೂಕ್ತ ತರಬೇತಿ ನೀಡಿ ಇನ್ನೊಂದು ವಾರದಲ್ಲಿ ವಿತರಿಸಲು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ನಿರ್ಧರಿಸಿದ್ದಾರೆ.
ಪೊಲೀಸ್ ನಡವಳಿಕೆ ಹಾಗೂ ವಾಹನ ಸವಾರರೊಂದಿಗೆ ನಡೆಯುವ ಅನಗತ್ಯ ಮಾತಿನ ಸಂಘರ್ಷ ತಪ್ಪಿಸಲು ಕೆಲವು ತಿಂಗಳ ಹಿಂದೆ ಟ್ರಾಫಿಕ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗಿತ್ತು. ಅಲ್ಲದೇ ಕೆಲವು ದಿನಗಳ ಹಿಂದೆ 242 ಹೊಯಳ್ಸ ಸಿಬ್ಬಂದಿಗೆ ಒಟ್ಟು 482 ಕ್ಯಾಮರಾ ನೀಡಲಾಗಿತ್ತು. ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ಹಾಗೂ ದೂರುಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್‌ನಡಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಇನ್ಸ್ಪೆಕ್ಟರ್ಗಳಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗುತ್ತಿದೆ.
ಬೆಂಗಳೂರಿನಂತಹ ನಗರದಲ್ಲಿ ಕಾರ್ಯನಿರ್ವಹಿಸುವ ಇನ್ಸ್ಪೆಕ್ಟರ್ಗಳು ಅಪರಾಧ ಪ್ರಕರಣ ಬೇಧಿಸುವುದರ ಜೊತೆಗೆ ಬಂದೋಬಸ್ತ್, ಪ್ರತಿಭಟನೆ-ಧರಣಿ ಹಾಗೂ ಗಲಾಟೆ ನಡೆದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಪ್ರಕರಣ ದಾಖಲಿಸುವಲ್ಲಿ, ಆರೋಪಿಗಳನ್ನು ಹಿಡಿಯುವಲ್ಲಿ ಕೊಂಚ ತಡವಾದರೂ ಪೊಲೀಸರ ಮೇಲೆ ದೂರುದಾರರು ಅನಗತ್ಯ ಆರೋಪ ಮಾಡಿ ರಾದ್ದಾಂತ ಸೃಷ್ಟಿ ಮಾಡುತ್ತಾರೆ. ಇದು ಇನ್ಸ್ಪೆಕ್ಟರ್ಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವಂತೆ ಮಾಡುತ್ತದೆ.
ನಗರದಲ್ಲಿ ಗಲಾಟೆ, ಪ್ರತಿಭಟನೆ, ಮುಷ್ಕರ ನಡೆದ ಸಂದರ್ಭಗಳಲ್ಲಿ ಪೊಲೀಸರೊಂದಿಗೆ ಕೆಲವರು ಅನುಚಿತ ವರ್ತನೆ, ಕಾನೂನುಬಾಹಿರವಾಗಿ ವರ್ತಿಸಿರುವ ಉದಾಹರಣೆಗಳಿವೆ. ಜೊತೆಗೆ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರುವ ಶೋಷಿತರಿಗೆ ಬೆದರಿಕೆ, ದೂರು ಹಿಂಪಡೆಯುವಂತೆ ಒತ್ತಡ, ಸಾರ್ವಜನಿಕ ಪ್ರದೇಶಗಳಲ್ಲಿ ಜನರೊಂದಿಗೆ ತೋರುವ ಅಶಿಸ್ತು ಪ್ರದರ್ಶಿಸುವುದರಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಪೊಲೀಸರ ನಡವಳಿಕೆಯಲ್ಲಿ ದಕ್ಷತೆ ತರಲು ಹಾಗೂ ಜನಸ್ನೇಹಿ ಪೊಲೀಸ್ ನಿರ್ಮಿಸಲು ಬಾಡಿವೋರ್ನ್ ಕ್ಯಾಮರಾ ಸಹಕಾರಿಯಾಗಲಿದೆ.