ಬೆಂಗಳೂರು : ಡೆಂಘೀ ಜ್ವರದಿಂದ ಬಳಲುತ್ತಿದ್ದ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬೆಂಗಳೂರು ಪೊಲೀಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪವನ್ ಕುಮಾರ್ (30) ಎಂಬುವರೇ ಮೃತ ಕಾನ್ಸ್‌ಟೇಬಲ್ ಆಗಿದ್ದಾರೆ.
2018ರ ಬ್ಯಾಚಿನ ಕಾನ್ಸ್‌ಟೇಬಲ್ ಆಗಿದ್ದ ಪವನ್ ಕುಮಾರ್ ಕಲಾಸಿಪಾಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಬೆಂಗಳೂರು ಪೊಲೀಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪವನ್ ಪತ್ನಿ ಸಹ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲ ದಿನದಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ ಪವನ್ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ. ಪವನ್ ಅಕಾಲಿಕ ಸಾವಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಕ್ಕಳಲ್ಲಿ ಡೆಂಘೀ ಸೇರಿ ವಿಚಿತ್ರ ಜ್ವರ: ಇನ್ನೊಂದೆಡೆ ದಾವಣಗೆರೆ ಜಿಲ್ಲೆಯಲ್ಲಿ ಮಕ್ಕಳು ಚಳಿ, ಜ್ವರ, ಡೆಂಘೀ ಜ್ವರ ಹೀಗೆ ಹಲವಾರು ಸಮಸ್ಯೆಗಳಿಂದ (ಸೆಪ್ಟೆಂಬರ್ 21-2021) ಬಳಲಿದ್ದರು. ಬಹುತೇಕ ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಮಕ್ಕಳ ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಡಳಿತ ವಿಶೇಷ ಸಭೆಗಳನ್ನ ನಡೆಸಿ ಮಕ್ಕಳ ಮೇಲೆ 3ನೇ ಅಲೆ ಅಪ್ಪಳಿಸುತ್ತಿದೆ ಎಂಬ ಭೀತಿ ದೂರವಾಗಿಸಲು ಯೋಜನೆಗಳನ್ನು ರೂಪಿಸಿತ್ತು.
ಹೆಚ್ಚಿನ ಮಕ್ಕಳು ಜ್ವರದಿಂದ ತೀವ್ರವಾಗಿ ಬಳಲಿದ್ದರು. ಬಹುತೇಕರಲ್ಲಿ ಪ್ಲೇಟ್ಲೇಟ್ ಸಂಖ್ಯೆ ಕಡಿಮೆ ಆಗಿತ್ತು. ಜಿಲ್ಲಾಸ್ಪತ್ರೆ, ಬಾಪೂಜಿ ಮಕ್ಕಳ ಆಸ್ಪತ್ರೆ ಹಾಗೂ ಎಸ್‌ಎಸ್ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿತ್ತು. ಇದರ ಜೊತೆಗೆ ಕೆಲ ಮಕ್ಕಳನ್ನ ತೆಗೆದುಕೊಂಡು ದೂರದ ಉಡುಪಿಯ ಮಣಿಪಾಲ್ ಆಸ್ಪತ್ರೆಗೂ ಹೋಗಿದ್ದರು. ದಿನದಿಂದ ದಿನಕ್ಕೆ ಮಕ್ಕಳ ರಕ್ತ ಮಾದರಿ ತಪಾಸಣೆ ಹೆಚ್ಚಾಗಿತ್ತು.