ಬೆಂಗಳೂರು :ನಗರದ ಪೇಯಿಂಗ್ ಗೆಸ್ಟ್ಗಳಲ್ಲಿ (ಪಿಜಿ) ಉಳಿದುಕೊಳ್ಳುವವರ ವಿಳಾಸ ಸೇರಿ ಅಗತ್ಯ ಮಾಹಿತಿಗಳನ್ನ ಸಂಗ್ರಹಿಸಿ ಸ್ವಯಂಪ್ರೇರಿತವಾಗಿ ವೆಬ್ ಪೋರ್ಟಲ್ ರಚಿಸಿ, ಅದರಲ್ಲಿ ಮಾಹಿತಿ ನಮೂದಿಸುವಂತೆ ಪಿಜಿ ಮಾಲೀಕರಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಸೂಚಿಸಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಬಳಿಕ ಪಿಜಿಗಳಲ್ಲಿ ವಾಸವಾಗಿರುವ ಕೆಲ ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದಾರೆ. ಅಲ್ಲದೇ ನ್ಯಾಯಾಲಯದಿಂದ ಬರುವ ಸಮನ್ಸ್, ವಾರಂಟ್ ಜಾರಿ ಮಾಡಲು ಪಿಜಿ ನಿವಾಸಿಗಳ ಸಂಪೂರ್ಣ ವಿವರಗಳಿಲ್ಲ. ಇದರಿಂದ ಕಾನೂನಾತ್ಮಕ ಸಮಸ್ಯೆಯಾಗುತ್ತಿದೆ. ಹೀಗಾಗಿ ಮಾಲೀಕರಿಗೆ ವೆಬ್ ಪೋರ್ಟಲ್ ರಚಿಸಿ, ಪ್ರತಿಯೊಬ್ಬರ ಸಂಪೂರ್ಣ ವಿವರ ಸಂಗ್ರಹಿಸಿ ನಮೂದಿಸಬೇಕು ಎಂದು ಸೂಚಿಸಲಾಗಿದೆ. ಮಾಹಿತಿ ಸಂಗ್ರಹಿಸಿ ವೆಬ್ ಪೋರ್ಟಲ್ನಲ್ಲಿ ಹಾಕಬೇಕು ಎಂಬ ಕಡ್ಡಾಯವಿಲ್ಲ. ಸ್ವಯಂಪ್ರೇರಿತವಾಗಿ ಮಾಲೀಕರು ನಮೂದಿಸಬಹುದಾಗಿದೆ ಎಂದರು.
ನಗರದಲ್ಲಿ 5 ಸಾವಿರ ಪಿಜಿಗಳಿವೆ. ಸುಮಾರು 4.50 ಲಕ್ಷ ಜನರು ಪಿಜಿಗಳಲ್ಲಿ ಇದ್ದಾರೆ. ನಗರದ ಪೂರ್ವ ವೈಟ್ ಫೀಲ್ಡ್ ಹಾಗೂ ಆಗ್ನೇಯ ವಿಭಾಗಗಳಲ್ಲಿ ಹೆಚ್ಚು ಪಿಜಿಗಳಿವೆ. ಐಟಿಬಿಟಿ ಕಂಪನಿಗಳ ನೌಕರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಕೆಲವರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಕಾನೂನು ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಪಿಜಿ ಮಾಲೀಕರಿಗೆ ಪ್ರತ್ಯೇಕ ವೆಬ್ ಪೋರ್ಟಲ್ ರಚಿಸುವಂತೆ ತಿಳಿಸಲಾಗಿದೆ.