ಕರ್ನಾಟಕ

karnataka

ETV Bharat / state

ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಡಿಸಿಪಿಗಳಿಗೆ ಟಾಸ್ಕ್ ನೀಡಿದ ಪೊಲೀಸ್ ಕಮೀಷನರ್ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್​ ಪ್ರಕರಣಗಳ ನಿಯಂತ್ರಿಸಿ ಮತ್ತು ಆರೋಪಿಗಳ ಪತ್ತೆ ಹಚ್ಚಲು ಡಿಸಿಪಿಗಳಿಗೆ ಟಾಸ್ಕ್​ ನೀಡಲಾಗಿದೆ.

ಸೈಬರ್ ಪ್ರಕರಣಗಳ ತನಿಖೆ ನಡೆಸಲು ಡಿಸಿಪಿಗಳಿಗೆ ಟಾಸ್ಕ್
ಸೈಬರ್ ಪ್ರಕರಣಗಳ ತನಿಖೆ ನಡೆಸಲು ಡಿಸಿಪಿಗಳಿಗೆ ಟಾಸ್ಕ್

By ETV Bharat Karnataka Team

Published : Nov 17, 2023, 3:45 PM IST

ಬೆಂಗಳೂರು: ರಾಜಧಾನಿಯಲ್ಲಿ ಅಧಿಕವಾಗುತ್ತಿರುವ ಸೈಬರ್ ಅಪರಾಧಗಳನ್ನ‌ ಹತ್ತಿಕ್ಕಲು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮುಂದಾಗಿದ್ದು, ಈ ನಿಟ್ಟಿನಲ್ಲಿ‌ ಡಿಸಿಪಿಗಳಿಗೆ ಹೊಸ ಜವಾಬ್ದಾರಿ ವಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ‌ ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂ (ಎಇಪಿಎಸ್)ನಡಿ ಬಯೋಮೆಟ್ರಿಕ್ ಮೂಲಕ ಬ್ಯಾಂಕ್ ಖಾತೆಯಲ್ಲಿ ಹಣ ಲಪಟಾಯಿಸುವ ಟ್ರೆಂಡ್ ಮಾಡಿಕೊಂಡಿರುವ ಸೈಬರ್ ಖದೀಮರ ವಿರುದ್ಧ ಬೆಂಗಳೂರಿನಲ್ಲಿ‌ 116 ಪ್ರಕರಣ ದಾಖಲಾಗಿವೆ. ಇಂತಹ ಪ್ರಕರಣ ನಿಯಂತ್ರಿಸಿ ಆರೋಪಿಗಳ ಪತ್ತೆ‌ ಮಾಡುವಂತೆ ನಗರ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಅವರಿಗೆ ಟಾಸ್ಕ್ ಕೊಡಲಾಗಿದೆ.

ನಗರದಲ್ಲಿ ದಾಖಲಾಗಿರುವ ಕೊರಿಯರ್ ಅಥವಾ ಗಿಫ್ಟ್ ಬಂದಿದೆ ಎಂದು ಹೇಳಿ ಶುಲ್ಕ ಪಡೆದು ವಂಚನೆ‌ ಪ್ರಕರಣಗಳ ಪತ್ತೆಗಾಗಿ‌ ಪೂರ್ವ ವಿಭಾಗದ‌ ಡಿಸಿಪಿ‌ ಕುಲ್ದೀಪ್​​ ಕುಮಾರ್ ಜೈನ್​​, ಆನ್‌ಲೈನ್‌ ಟ್ರೇಡಿಂಗ್ ಪ್ರಕರಣ ಪತ್ತೆಗಾಗಿ ದಕ್ಷಿಣ ವಿಭಾಗದ ಡಿಸಿಪಿ ಶಿವರಾಜ್‌‌ ದೇವರಾಜ್‌ ಹಾಗೂ ಖಾಸಗಿ ವಿಡಿಯೋ ಅಥವಾ ಭಾವಚಿತ್ರ ಇಟ್ಟುಕೊಂಡು ಧಮ್ಕಿ ಹಾಕಿ ಹಣದ ಬೇಡಿಕೆ‌‌ ಪ್ರಕರಣಗಳ ಪತ್ತೆಗಾಗಿ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರಿಗೆ ವಹಿಸಲಾಗಿದೆ.

ನಗರದಲ್ಲಿ ದಾಖಲಾಗುತ್ತಿರುವ ಒಂದೇ‌‌ ಮಾದರಿಯ ವಿವಿಧ ಸೈಬರ್ ಅಪರಾಧ ಪ್ರಕರಣಗಳ ಪತ್ತೆಗಾಗಿ ಪ್ರತ್ಯೇಕವಾಗಿ ಡಿಸಿಪಿಗಳಿಗೆ ಕೂಲಂಕಷ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು‌ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಪ್ರತಿಕ್ರಿಯಿಸಿದ್ದು, ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂ ವಂಚನೆ‌ ಪ್ರಕರಣಗಳ‌ ಸಮಗ್ರ ತನಿಖೆ‌ ನಡೆಸುವಂತೆ ಆಯುಕ್ತರು ಸೂಚಿಸಿದ್ದಾರೆ. ನಗರದಲ್ಲಿ ಎಲ್ಲೆಲ್ಲಿ ಎಇಪಿಎಸ್ ವಂಚನೆ‌ ಪ್ರಕರಣಗಳು ನಡೆದಿವೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಸಂಗ್ರಹಿಸಬೇಕಿದೆ. ಮೋಸ ಮಾಡಲು ವಂಚಕರು ಬಳಸಿಕೊಂಡ ವಿಧಾನದ ಕುರಿತ‌ ಪ್ರಕರಣಗಳನ್ನ ಅಧ್ಯಯನ‌ ನಡೆಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಜನರೇ ಎಚ್ಚರ.. ವಂಚಿಸಲೆಂದೇ 27 ವಿವಿಧ ವೇದಿಕೆಗಳನ್ನು ಬಳಸುತ್ತಿರುವ ಸೈಬರ್ ಕ್ರಿಮಿನಲ್‌ಗಳು: ಉದ್ಯೋಗದ ಹೆಸರಲ್ಲೇ ಹೆಚ್ಚು ಮೋಸ

12,615 ಪ್ರಕರಣಗಳು:ಸೈಬರ್ ಕ್ರೈಂ ಪ್ರಕರಣಗಳ‌ ಸಂಖ್ಯೆ ದಿನೆ ದಿನೇ ಹೆಚ್ಚಳವಾಗತೊಡಗಿದ್ದು, ಇದಕ್ಕೆ ಪೂರಕ ಎಂಬಂತೆ ಅ.11ರ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 12,615 ಪ್ರಕರಣಗಳು ವರದಿಯಾಗಿದ್ದು, ಸುಮಾರು 470 ಕೋಟಿ‌ ರೂಪಾಯಿ ವಂಚನೆಯಾಗಿದೆ.

ರಾಜಧಾನಿಯಲ್ಲಿ ದಾಖಲಾಗಿದ್ದ 12,615 ಪ್ರಕರಣಗಳನ್ನು ತನಿಖೆ ನಡೆಸಿ ವಿವಿಧ ಬ್ಯಾಂಕ್​ಗಳ ಮುಖಾಂತರ 201.83 ಕೋಟಿ ರೂ. ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸೈಬರ್ ಖದೀಮರಿಂದ 28.40 ಕೋಟಿ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 27.68 ಕೋಟಿ ವಾರಸುದಾರರಿಗೆ ಪೊಲೀಸರು ಹಿಂತಿರುಗಿಸಿದ್ದಾರೆ.

ಇದನ್ನೂ ಓದಿ:ಸೈಬರ್​ ವಂಚಕರಿಗೆ ಬೆಂಗಳೂರು ಪೊಲೀಸರ ಮಾಸ್ಟರ್​ ಸ್ಟ್ರೋಕ್​: ಕೃತ್ಯಕ್ಕೆ ಬಳಕೆಯಾಗುವ ಮೊಬೈಲ್​, ಸಿಮ್​ ಕಾರ್ಡ್ಸ್​ ಬ್ಲಾಕ್​

ABOUT THE AUTHOR

...view details