ಬೆಂಗಳೂರು: ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಫಾಸ್ಟ್ ಪುಡ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ. ಏಪ್ರಿಲ್ 7ರಂದು ಈ ಘಟನೆ ನಡೆದಿದೆ. ಕೆಲ ವಿಚಾರ ಕುರಿತಂತೆ ಮಾಲೀಕ ಹಾಗೂ ಯುವಕ ನಡುವೆ ವಾಗ್ವಾದ ನಡೆದಿದೆ ಎನ್ನಲಾಗುತ್ತಿದೆ. ತನಗೆ ನ್ಯಾಯ ಕೊಡಿಸಿ ಎಂದು ಯುವಕ ವಿಡಿಯೋದಲ್ಲಿ ಕೇಳಿಕೊಂಡಿದ್ದಾನೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದು, ''ಟ್ವಿಟರ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಯುವಕ ಫಾಸ್ಟ್ ಫುಡ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ಗ್ರಾಹಕರ ಜೊತೆ ಗಲಾಟೆಯಾದ ಬಗ್ಗೆ ಆತ ಹೇಳಿಕೊಂಡಿದ್ದಾನೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಹಿನ್ನೆಲೆ ಕುರಿತಂತೆ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆ ವ್ಯಕ್ತಿಯು ಬಿಹಾರ ಮೂಲದವ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗ್ರಾಹಕರ ಜೊತೆ ವಾಗ್ವಾದ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸದ್ಯ ಆತ ಬೆಂಗಳೂರು ಬಿಟ್ಟು ಬಿಹಾರಕ್ಕೆ ತೆರಳಿದ್ದಾನೆ. ಹೀಗಾಗಿ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ'' ಎಂದು ಆಯುಕ್ತರು ತಿಳಿಸಿದ್ದಾರೆ.