ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಬೆಂಗಳೂರು: ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅವ್ಯವಹಾರದಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವುದು ಖಚಿತ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪುನರುಚ್ಚರಿಸಿದ್ದಾರೆ. ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯೇ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಕೂಡಿಟ್ಟು ನಲವತ್ತು ಲಕ್ಷ ರೂ. ಗೆ ಬೇಡಿಕೆಯಿಟ್ಟ ಪ್ರಕರಣ ಸಂಬಂಧ ಇನ್ಫ್ಯಾಂಟ್ರಿ ರಸ್ತೆಯ ತಮ್ಮ ಕಚೇರಿಯಲ್ಲಿ ಮಾತನಾಡಿದ ಆಯುಕ್ತರು ಮತ್ತೊಮ್ಮೆ ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿದರು.
ಇದನ್ನೂ ಓದಿ :ಮೊಬೈಲ್ ಕಳವು ನಡೆದರೆ ಎಫ್ಐಆರ್ ಕಡ್ಡಾಯ: ಬೆಂಗಳೂರು ಪೊಲೀಸ್ ಕಮಿಷನರ್ ಖಡಕ್ ಸೂಚನೆ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಾಗಲೂರು ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಿಸಿ ಕೂಡಿ ಹಾಕಿರುವ ಆರೋಪವಿದೆ. ಪ್ರಕರಣದಲ್ಲಿ ಓರ್ವ ಪಿಎಸ್ಐ ಸಹಿತ ಮೂವರು ಸಿಬ್ಬಂದಿ ಕೈವಾಡ ಇರುವುದು ಪತ್ತೆಯಾಗಿದೆ. ಇದುವರೆಗೂ ಮೂವರ ಆರೋಪಿಗಳ ಬಂಧನವಾಗಿದ್ದು, ಪಿಎಸ್ಐ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ತನಿಖೆ ಮುಂದುವರೆಸಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ :2022ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಬೆಂಗಳೂರಲ್ಲಿ ಇಳಿಮುಖ : ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
"ಇಲಾಖೆಯಲ್ಲಿ ಈ ರೀತಿಯ ದುರ್ವ್ಯವಹಾರದಲ್ಲಿ ತೊಡಗಿದವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಲಾಗಿದೆ, ಮುಂದೆಯೂ ಕೂಡ ಕ್ರಮ ಕೈಗೊಳ್ಳಲಾಗುತ್ತದೆ. 99.9% ಸಿಬ್ಬಂದಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಈ ರೀತಿ ಇರುವ ಬೆರಳೆಣಿಕೆಯಷ್ಟು ಸಿಬ್ಬಂದಿಯ ವಿರುದ್ಧ ಅಮಾನತ್ತು ಮತ್ತು ಸೇವೆಯಿಂದ ವಜಾ ಸೇರಿದಂತೆ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಪಾತ್ರವಿದ್ದಲ್ಲಿ ಅವರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು. ಈಗ ಈ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ತನಿಖೆ ಮಾಡಲಾಗುತ್ತಿದೆ" ಎಂದರು.
ಇದನ್ನೂ ಓದಿ :ಕ್ರಿಕೆಟ್ ಬೆಟ್ಟಿಂಗ್ ಗೀಳಿಗೆ ಸಿಲುಕಿದ ಪೊಲೀಸ್ ಕಾನ್ಸ್ಟೇಬಲ್.. ಅಡ್ಡದಾರಿ ಹಿಡಿದು ಸಿಕ್ಕಿಬಿದ್ದ ಆರೋಪಿ
ಏನಿದು ಪ್ರಕರಣ? : ಹುಲಿ ಚರ್ಮ ಮತ್ತು ಉಗುರು ಮಾರಾಟ ದಂಧೆಯಲ್ಲಿ ತೊಡಗಿದ್ದ ಎನ್ನಲಾದ ರಾಮಾಂಜಿ ಎಂಬಾತನನ್ನ ಅಪಹರಿಸಿ, ಅಕ್ರಮವಾಗಿ ಕೂಡಿಟ್ಟು ನಲವತ್ತು ಲಕ್ಷ ರೂ. ಗೆ ಡಿಮ್ಯಾಂಡ್ ಮಾಡಿದ್ದ ಆರೋಪದಡಿ ಮಾರತ್ ಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಂಗೇಶ್, ಕಾನ್ಸ್ಟೇಬಲ್ ಸಹಿತ ಮೂವರ ವಿರುದ್ಧ ಬಾಗಲೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಸಿನಿಮೀಯ ಶೈಲಿಯಲ್ಲಿ ಅಕ್ರಮವಾಗಿ ವ್ಯಕ್ತಿಯನ್ನ ಕೂಡಿಟ್ಟು, ಹಣೆಗೆ ಗನ್ ಇಟ್ಟು 40 ಲಕ್ಷಕ್ಕೆ ಬೇಡಿಕೆಯಿಟ್ಟ ಆರೋಪ ಪಿಎಸ್ಐ ವಿರುದ್ಧ ಕೇಳಿ ಬಂದಿತ್ತು. ಸದ್ಯಕ್ಕೆ ಈ ಕೇಸ್ಗೆ ಸಂಬಂಧಿಸಿಂತೆ ಕಾನ್ಸ್ಟೇಬಲ್ ಬಂಧನವಾಗಿದ್ದು ಪಿಎಸ್‌ಐ ರಂಗೇಶ್ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ :ಟೋಯಿಂಗ್ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ
ಇದನ್ನೂ ಓದಿ :ಮನೆಯ ಲಾಕರ್‌ನಲ್ಲಿ ಹುಲಿ ಚರ್ಮ ಸಂಗ್ರಹಿಸಿಟ್ಟಿದ್ದ ಆರೋಪಿ ಸೆರೆ