ಬೆಂಗಳೂರು:ನಾಳೆ ರಾತ್ರಿ 10ರಿಂದ ನೈಟ್ ಕರ್ಫ್ಯೂ ಆದೇಶ ಜಾರಿಯಾಗಲಿದೆ. ಇದು ಜನವರೆಗೂ ಮುಂದುವರಿಯಲಿದ್ದು, ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೂ ನಗರದಾದ್ಯಂತ ಜಾರಿಯಾಗುತ್ತಿದೆ. ಸರ್ಕಾರಿ ನಿಯಮಾನುಸಾರ ಕಠಿಣವಾದ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷಾಚರಣೆ ಅವಧಿಯಲ್ಲಿ ಕಠಿಣ ನೈಟ್ ಕರ್ಫ್ಯೂ ಕಾಪಾಡಲು ಪೊಲೀಸರ ಸಿದ್ಧತೆ ಹಾಗೂ ಕರ್ಫ್ಯೂ ಅವಧಿಯಲ್ಲಿ ಅನುಮತಿ ನೀಡಲಾಗಿರುವ ಚಟುವಟಿಕೆಗಳ ಕುರಿತು ಪಂತ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯವಾಗಿ ತುರ್ತು ಚಿಕಿತ್ಸೆ ಅಗತ್ಯವಿರುವವರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಪ್ರಯಾಣ ಕೈಗೊಳ್ಳಲು ಅವಕಾಶ ನೀಡಿದ್ದಾರೆ.
ರಾತ್ರಿ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಕೈಗಾರಿಕಾ ಘಟಕಗಳ ಉದ್ಯೋಗಿಗಳಿಗೆ, ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಕಂಪನಿ ಸಿಬ್ಬಂದಿ, ಐಟಿ ಮತ್ತು ಅಗತ್ಯ ಸೇವಾ ಕಂಪನಿ ಕೆಲಸಗಾರರಿಗೆ, ಗೂಡ್ಸ್ ಹಾಗೂ ಹೋಮ್ ಡೆಲಿವರಿ ವಾಹನ/ಸಿಬ್ಬಂದಿ, ಸಾರ್ವಜನಿಕ ಸಾರಿಗೆ, ರೈಲು, ಮೆಟ್ರೋ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.