ಕರ್ನಾಟಕ

karnataka

ETV Bharat / state

ಪೊಲೀಸ್ ದೌರ್ಜನ್ಯ ಪ್ರಕರಣ : ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶೀಘ್ರ ಕ್ರಮಕ್ಕೆ ಕಾಲಾವಕಾಶ ಕೇಳಿದ ಸರ್ಕಾರ! - ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮನವಿ

ಮಹದಾಯಿ ಹೋರಾಟದ ವೇಳೆ ರೈತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದ್ದು, ಅದಕ್ಕಾಗಿ ಆರು ವಾರ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮನವಿ ಮಾಡಿದೆ.

highcourt
ಹೈಕೋರ್ಟ್

By

Published : Jan 31, 2020, 9:08 PM IST

ಬೆಂಗಳೂರು: ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಪ್ರತಿಭಟಿಸಿದ್ದ, ರೈತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದ್ದು, ಅದಕ್ಕಾಗಿ ಆರು ವಾರ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮನವಿ ಮಾಡಿದೆ.

ಮಹದಾಯಿ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ಮೇಲೆ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ, ಬೆಂಗಳೂರಿನ ದೀಕ್ಷಾ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಗೃಹ ಇಲಾಖೆ ಸಿದ್ದಪಡಿಸಿದ್ದ ಪ್ರಮಾಣಪತ್ರವನ್ನು ಪೀಠಕ್ಕೆ ಸಲ್ಲಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ. ಅದಕ್ಕಾಗಿ ಆರು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಕಮಲ್‌ಪಂತ್ ಅವರು ನೀಡಿರುವ ವರದಿ ಆಧರಿಸಿ, ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅದರಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಲವು ಸುತ್ತಿನ ಚರ್ಚೆ ನಡೆಸಿದೆ. ವರದಿಯು ಹಲವು ಸಂಪುಟಗಳಿಂದ ಕೂಡಿದ್ದು, ಅಂತಿಮ ತೀರ್ಮಾನಕ್ಕೆ ಬರಲು ಕಾಲಾವಕಾಶದ ಅಗತ್ಯವಿದೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸರ್ಕಾರಿ ವಕೀಲರು ಪೀಠಕ್ಕೆ ವಿವರಿಸಿದರು.

ರಾಜ್ಯ ಸರ್ಕಾರದ ಮನವಿಗೆ ಪ್ರತಿಕ್ರಿಯಿಸಿದ ಪೀಠ, ಆರು ವಾರ ಬದಲಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು. ಇದಾದ ಬಳಿಕ ಮತ್ತಷ್ಟು ಕಾಲಾವಕಾಶ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತು. ಜೊತೆಗೆ, ಮುಂದಿನ ವಿಚಾರಣೆ ವೇಳೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ 2016ರಲ್ಲಿ ನವಲಗುಂದ ಸಮೀಪದ ಯಮನೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಪೊಲೀಸ್ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗಿದ್ದರು. ಈ ಕುರಿತು ವರದಿ ನೀಡುವಂತೆ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿ ಕಮಲ್ ಪಂತ್​​​ ಅವರಿಗೆ ಸೂಚಿಸಿತ್ತು. ಅದರಂತೆ ಐಪಿಎಸ್ ಅಧಿಕಾರಿ ಕಮಲ್ ಪಂತ್​​​​​ ನೀಡಿರುವ ವರದಿಯ ಶಿಫಾರಸು ಮೇರೆಗೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈವರೆಗೆ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ABOUT THE AUTHOR

...view details