ಬೆಂಗಳೂರು:ಡಿಜೆ ಹಳ್ಳಿ ಪೊಲೀಸ್ ಠಾಣೆ ಹಾಗೂ ಸಾರ್ವಜನಿಕರ ನಡುವೆ ಆಗಾಗ ಗಲಾಟೆ ನಡೆಯುವುದು ಸರ್ವೇ ಸಾಮಾನ್ಯವಾಗಿದೆ. ಹಾಗಾಗಿ ಸಾರ್ವಜನಿಕರು ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಕೂಡಲೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಮುಗಿ ಬೀಳ್ತಾರೆ. ಅಲ್ಲದೆ ಅಲ್ಲಿನ ನಿವಾಸಿಗಳನ್ನ ಸಂಭಾಳಿಸೋದೆ ಪೊಲೀಸರಿಗೆ ಹರಸಾಹಸವಾಗಿ ಬಿಟ್ಟಿದೆ.
ಹೌದು, ಡಿಜೆ ಹಳ್ಳಿ ಅಂದ್ರೆ ದಿನಕ್ಕೆ ನೂರಾರು ಗಾಂಜಾ ಪ್ರಕರಣಗಳು ವರದಿಯಾಗ್ತಾಲೆ ಇರ್ತಾವೆ. ಈ ಹಿಂದೆ ಕೂಡ ಓರ್ವ ಯುವಕ ಗಾಂಜಾ ಕೇಸ್ನಲ್ಲಿ ಅಂದರ್ ಆಗಿ ಪೊಲೀಸರ ಬಳಿ ಹೊಡೆಸಿಕೊಂಡ ಪ್ರಕರಣವನ್ನ ಅಲ್ಲಿನ ನಿವಾಸಿಗಳು ದೊಡ್ಡ ಸುದ್ದಿ ಮಾಡಿ, ಅಲ್ಲಿನ ಇನ್ಸ್ಪೆಕ್ಟರ್ ವರ್ಗಾವಣೆ ಆಗುವವರೆಗೂ ಪ್ರತಿಭಟನೆ ನಡೆಸಿದ್ದರು.
ಸದ್ಯ ಇದೇ ರೀತಿಯ ಪ್ರಕರಣಕ್ಕೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಮೊನ್ನೆ ಸುದ್ದಿಯಾಗಿದೆ. ಮೊಹಮ್ಮದ್ ತನ್ವೀರ್ ಅನ್ನೋ ಯುವಕ ಮೆಡಿಸಿನ್ ತರಲು ತನ್ನ ಸ್ನೇಹಿತನೊಂದಿಗೆ ತೆರಳಿದಾಗ, ಇದನ್ನ ಗಮನಸಿದ ಪೊಲೀಸರು ಫೋನ್ನಲ್ಲಿ ಮಾತನಾಡುತ್ತಿದ್ದ ಅಂತ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಿಡ್ನಿ ಹೋಗುವ ಮಟ್ಟಿಗೆ ಹಲ್ಲೆ ಮಾಡಿದ್ದಾರೆ. ನಂತರ ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಅಲ್ಲಿನ ಪಿಎಸ್ಐ ಸಂತೋಷ್ ಹಾಗೂ ಪೇದೆ ಅಯ್ಯಪ್ಪನನ್ನ ಸಸ್ಪೆಂಡ್ ಮಾಡಿ ಇಲ್ಲ ವರ್ಗಾಯಿಸಿ ಅಂತ ಪಟ್ಟು ಹಿಡಿದಿದ್ರು.
ಈ ಹಿನ್ನೆಲೆ ಪ್ರಕರಣದ ಗಂಭೀರತೆ ಅರಿತ ಪೊಲೀಸ್ ಆಯುಕ್ತರು, ಕೂಡಲೇ ಇಬ್ಬರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಆದ್ರೆ ಇಲ್ಲಿಗೆ ನಿಲ್ಲದ ಪ್ರತಿಭಟನೆ, ಮತ್ತಷ್ಟು ತೀವ್ರತೆ ಪಡೆದುಕೊಂಡು ಇದೀಗ ಠಾಣೆಯ ಅಷ್ಟೂ ಜನ ಸಿಬ್ಬಂದಿಯನ್ನ ಅಮಾನತು ಮಾಡಬೇಕೆಂಬ ಒಕ್ಕೊರಲ ಕೂಗು ಇಡೀ ಡಿಜೆ ಹಳ್ಳಿ ನಿವಾಸಿಗಳದ್ದಾಗಿದೆ. ಇಷ್ಟಕ್ಕೇ ನಿಲ್ಲದೆ ಫೇಸ್ಬುಕ್ನಲ್ಲಿ ಬೆಂಗಳುರು ಸಿಟಿ ಪೊಲೀಸ್ ಪೇಜ್ಗೆ ಟ್ಯಾಗ್ ಮಾಡೋ ಮೂಲಕ ಈ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದದುಕೊಂಡಿದೆ.