ಬೆಂಗಳೂರು: ನಗರದ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಚಿನ್ನಾಭರಣ, ದ್ವಿಚಕ್ರ ವಾಹನ ಕಳ್ಳತನ, ಗಾಂಜಾ ಮಾರಾಟ ಪ್ರಕರಣದಲ್ಲಿ ಬೇಕಾಗಿದ್ದ ವಿವಿಧ ಠಾಣೆಯ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿನ್ನಾಭರಣ, ದ್ವಿಚಕ್ರ ವಾಹನಗಳನ್ನು ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಆರೋಪಿಗಳನ್ನ ಬಂಡೆಪಾಳ್ಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಾಗೇಶ್, ಪ್ರವೀಣ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ 1 ಲೈಂಗಿಕ ಕಿರುಕುಳ ಪ್ರಕರಣ, 7 ಕನ್ನ ಕಳವು ಪ್ರಕರಣ, ಎರಡು ದ್ವಿಚಕ್ರ ಕಳ್ಳತನ ಸೇರಿದಂತೆ ಒಟ್ಟು 9 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಭಾಗಿಯಾಗಿರುವ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಬಂಧಿತರಿಂದ ವಶಪಡಿಸಿಕೊಂಡ ಚಿನ್ನಾಭರಣಗಳು ಇನ್ನು ಬಂಧಿತರಿಂದ ಸುಮಾರು 19.50 ಬೆಲೆಬಾಳುವ 541 ಗ್ರಾಂ ಚಿನ್ನಾಭರಣ, ಎರಡು ದ್ವಿಚಕ್ರ ವಾಹನಗಳನ್ನ ಖಾಕಿ ಪಡೆ ವಶ ಪಡೆಸಿಕೊಂಡಿದೆ.
ಅಲ್ಲದೆ ಒಡಿಶಾ ರಾಜ್ಯ ಮೂಲದ ಮತ್ತೊಬ್ಬ ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ರಂಜಿತ್ ದಾಸ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1.440 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಮಾಡುತಿದ್ದ ಆರೋಪಿಗಳನ್ನ ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಜೈನ್, ರೋಹಿತ್ ಕೆ ರಾಥೋಡ್, ಇರ್ಷಾದ್, ಜಾಬೀರ್ ಪಾಷ್ ಬಂಧಿತ ಆರೋಪಿಗಳು.
ಆರೋಪಿಗಳು ಗಾಂಜಾ ವಸ್ತುವನ್ನು ಮೈಸೂರಿನಿಂದ ತರಿಸಿಕೊಂಡು, ಬೆಂಗಳೂರಿನ ಜಯನಗರ, ತಿಲಕನಗರ,ಕೋರಮಂಗಲ, ಹಾಗು ಇತರೆ ಪ್ರತಿಷ್ಠಿತ ಏರಿಯಾದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಪರಿಚಯಸ್ಥ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಜನ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸ್ರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 1 ಲಕ್ಷ ಬೆಲೆಬಾಳುವ 5.20 ಕೆ.ಜಿ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಆಗ್ನೇಯ ವಿಭಾಗದ ಪೊಲೀಸರಿಂದ ಒಟ್ಟು 7 ಜನ ಖತರ್ನಾಕ್ ಆರೋಪಿಗಳನ್ನ ಜೈಲುಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನ ಕಳೆದುಕೊಂಡ ಮಾಲೀಕರಿಗೆ ಚಿನ್ನದ ಸರಗಳನ್ನ ವಾಪಸ್ ತಲುಪಿಸುವ ಕೆಲಸದಲ್ಲಿ ಪೊಲೀಸರು ತೊಡಗಿಕೊಂಡಿದ್ದಾರೆ.