ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಜೆಡಿಎಸ್ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಕೊಲೆ ಮಾಡಿದ ದಂಪತಿಯನ್ನು ಬಂಧಿಸಲಾಗಿದೆ.
ಇಂಟರೆಸ್ಟಿಂಗ್ ವಿಷಯ ಎಂದರೆ ಹತ ಸಂತೋಷ್ ಮಾಡಿದ ಬ್ಲ್ಯಾಕ್ ಮೇಲ್ ತಂತ್ರವೇ ಆತನ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಜೆಡಿಎಸ್ ಕಾರ್ಯಕರ್ತನ ಹತ್ಯೆ ಆರೋಪಿಗಳ ಬಂಧನ ಮಂಜುನಾಥ್ ಮತ್ತು ಸಾವಿತ್ರಿ ಬಂಧಿತ ದಂಪತಿ. ಹತ ಸಂತೋಷ್ ಕೊಲೆ ಆರೋಪಿ ಮಂಜುನಾಥ್ ಜೊತೆ ಸ್ನೇಹವಿತ್ತು. ಆರೋಪಿ ಆಟೊ ಡ್ರೈವರ್ ಆಗಿದ್ದ, ಜೊತೆಗೆ ಚೀಟಿ ಸಹ ನಡೆಸುತ್ತಿದ್ದ. ಸಲುಗೆಯಿಂದ ಆಗಾಗ್ಗೆ ನಂದಿನಿ ಲೇಔಟ್ನಲ್ಲಿರುವ ಸ್ನೇಹಿತ ಮಂಜುನಾಥ್ ಮನೆಗೆ ಬರುತ್ತಿದ್ದ ಸಂತೋಷ್, ಮಂಜುನಾಥ್ ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದನಂತೆ. ಜೊತೆಗೆ ಅವರ ಮನೆಗೆ ರಹಸ್ಯ ಕ್ಯಾಮೆರಾ ಅಳವಡಿಸಿ ದಂಪತಿ ಸ್ನಾನ ಮಾಡುವ ದೃಶ್ಯ ಹಾಗೂ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದನಂತೆ. ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಸಂತೋಷ್ನನ್ನು ದಂಪತಿ ಮನೆಗೆ ಕರೆಸಿ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಗೋಣಿಚೀಲದಲ್ಲಿ ತುಂಬಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
ಸಿಕ್ಕಿಬಿದ್ದದ್ದು ಹೇಗೆ?
ಗೋಣಿಚೀಲದಲ್ಲಿ ಸಿಕ್ಕ ಹೆಣ ಹೇಗೆ ಬಂತು, ಕೊಲೆ ಮಾಡಿದವರು ಯಾರು ಎಂಬೆಲ್ಲಾ ಸಾಕ್ಷಿಗಳು ಸಿಗದೆ ಪೊಲೀಸರು ಬೇಸತ್ತಿದ್ದಾಗ. ಅನತಿ ದೂರದಲ್ಲಿದ್ದ ಸಿಸಿ ಕ್ಯಾಮೆರಾವೊಂದು ತನಿಖೆಗೆ ಸಹಕಾರಿಯಾಗಿದೆ. ಆ ಕ್ಯಾಮೆರಾದ ಫುಟೇಜ್ ತೆಗೆದು ನೋಡಿದಾಗ ಆಟೊದಲ್ಲಿ ಹೆಣ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ. ಅದನ್ನು ಆಧಾರವಾಗಿಟ್ಟುಕೊಂಡು ಮಂಜುನಾಥ್ ದಂಪತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.