ಬೆಂಗಳೂರು: ಐಸಿಯು ಬೆಡ್ ಕೊಡಿಸುತ್ತೇನೆ ಎಂದು ಕೊರೊನಾ ಸೋಂಕಿತ ಕುಟುಂಬಸ್ಥರಿಂದ ಹಣ ಪಡೆದು ವಂಚಿಸುತ್ತಿದ್ದ ವಂಚಕನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮನೀಶ್ ಸರ್ಕಾರ್ ಬಂಧಿತ ಆರೋಪಿ. ನಗರದ ಕಂಪೆನಿಯೊಂದರಲ್ಲಿ ಹೌಸ್ ಕೀಪಿಂಗ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಈತ, ಕೊರೊನಾ ಅಲೆಯ ಹಿನ್ನೆಲೆ ಸುಲಭವಾಗಿ ಹಣ ಸಂಪಾದನೆ ಮಾಡಲು ವಾಮಮಾರ್ಗ ಹಿಡಿದಿದ್ದಾನೆ. ಬಿಬಿಎಂಪಿ ಕೋಟಾದಡಿ ಐಸಿಯು ಎಮರ್ಜೆನ್ಸಿ ಬೆಡ್ ಕೊಡಿಸುತ್ತೇನೆ ಎಂದು ವಾಟ್ಸಾಪ್ ನಲ್ಲಿ ಬೇರೆ ಬೇರೆ ಗ್ರೂಪ್ ಗಳಿಗೆ ಸಂದೇಶ ಹರಿಬಿಡುತ್ತಿದ್ದ. ಇದನ್ನ ನೋಡಿದ ಬಹಳಷ್ಟು ಜನರು ಕರೆ ಮಾಡುತ್ತಿದ್ದರು. ನಂತರ ಜನರಿಗೆ ಉತ್ತರಿಸುತ್ತಿದ್ದ ಆತ, ಬೆಡ್ ಅರೆಂಜ್ ಮಾಡುತ್ತೇನೆ. ಹಣ ಖರ್ಚು ಮಾಡಬೇಕು ಎಂದು ಹುಸಿ ಭರವಸೆ ನೀಡುತ್ತಿದ್ದ ಎಂಬುದು ತಿಳಿದುಬಂದಿದೆ.
ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಇದೇ ರೀತಿ ಸ್ಟೀಫನ್ ರಾಜ್ ಎಂಬುವವರು ಆರೋಪಿಗೆ ಕರೆ ಮಾಡಿ ತಾಯಿಗೆ ಸೋಂಕು ತಗುಲಿದ್ದು, ಐಸಿಯು ಬೆಡ್ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ. ನಂತರ ಮಾತುಕತೆ ನಡೆಸಿ, ಆರೋಪಿಯನ್ನು ಭೇಟಿ ಮಾಡಿದ್ದಾರೆ. ಇದಾದ ಮೇಲೆ ಬಿಬಿಎಂಪಿ ಕೋಟಾದಡಿ ಈಗಾಗಲೇ ಬೆಡ್ ರೆಡಿಯಿದೆ ಎಂದು ನಂಬಿಸಿ ಮುಂಗಡವಾಗಿ 25 ಸಾವಿರ ರೂಪಾಯಿ ಪಾವತಿಸಬೇಕೆಂದು ಹೇಳಿ ಮನೀಶ್ ಹಣ ಪಡೆದಿದ್ದಾನೆ. ಹಣ ಜೇಬಿಗಿಳಿಸುತ್ತಿದ್ದಂತೆ ಸ್ಟೀಫನ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾನೆ. ಇದರಿಂದಾಗಿ ಆರೋಪಿ ವಂಚಿಸಿರುವುದು ಗೊತ್ತಾಗಿದೆ. ಸದ್ಯ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿರುವುದಾಗಿ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಬಿಬಿಎಂಪಿ ಕೋಟಾದಡಿ ಬೆಡ್ ಕೊಡಿಸುವುದಾಗಿ ಯಾರಾದರೂ ಹಣ ಕೇಳಿದರೆ ದಯವಿಟ್ಟು ದುಡ್ಡು ಕೊಡಬೇಡಿ. ಇಂತಹ ವಂಚನೆ ಮಾಡುತ್ತಿರುವುದು ಗೊತ್ತಾದರೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಡಿಸಿಪಿ ಮನವಿ ಮಾಡಿದ್ದಾರೆ.
ಓದಿ:ಉಮೇಶ್ ಕತ್ತಿ ಇರೆಸ್ಪಾನ್ಸಿಬಲ್ ಮಿನಿಸ್ಟರ್... ನೀ ಸಾಯಿ ಹೋಗು ಅನ್ನೋದು ಉದ್ದಟತನ: ಸಿದ್ದರಾಮಯ್ಯ