ಬೆಂಗಳೂರು: ಮಕ್ಕಳ ಕಳ್ಳ ಎಂದು ಭಾವಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯ ಅಸಹಜ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದ್ದು ತನಿಖೆ ನಡೆಸಿದಾಗ ಹಲ್ಲೆಯಿಂದ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ.
ವಿಜಿನಾಪುರ ನಿವಾಸಿಯಾಗಿರುವ ಪಾರ್ಥಿಬನ್, ಫಯಾಜ್ ಪಾಷ ಹಾಗೂ ಸಯ್ಯದ್ ಖಾಜಾ ಸೇರಿ ಮೂವರನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ ಮೂಲದ ಮೃತ ಸಂಜಯ್ ಕಳೆದ ಎರಡು ವರ್ಷಗಳಿಂದ ರಾಮಮೂರ್ತಿನಗರದಲ್ಲಿ ವಾಸವಾಗಿದ್ದು ಕೆ.ಆರ್. ಪುರಂ ದೇವಸಂದ್ರ ಬಳಿ ಮೇಸ್ತ್ರಿ ಶಿವಣ್ಣ ಎಂಬುವರ ಬಳಿ ಗಾರೆ ಕೆಲಸ ಮಾಡಿಕೊಂಡಿದ್ದ. ಕಳೆದ ತಿಂಗಳು 23 ರಂದು ರಾಮಮೂರ್ತಿನಗರದಲ್ಲಿ ಅನುಮಾನಸ್ಪಾದವಾಗಿ ಓಡಾಡುತ್ತಿರುವುದಾಗಿ ಸಂಜಯ್ನ ವರ್ತನೆ ಕಂಡು ಮಕ್ಕಳ ಕಳ್ಳ ಎಂದು ಭಾವಿಸಿ ಸಾರ್ವಜನಿಕರು ಹಲ್ಲೆ ನಡೆಸಿದ್ದರು. ಬಳಿಕ 112ಗೆ ಕರೆಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಹೊಯಳ್ಸ ಸಿಬ್ಬಂದಿ ಸಂಜಯ್ ನನ್ನ ಠಾಣೆಗೆ ಕರೆದೊಯ್ದಿದ್ದರು. ಠಾಣೆಯ ಪ್ರವೇಶದ್ವಾರದಲ್ಲೇ ಕೆಲಕ್ಷಣ ವಿಚಾರಣೆ ನಡೆಸಿದ ಪೊಲೀಸರು ತಮ್ಮ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಲು ನಿರಾಕರಿಸಿ ಸಂಜಯ್ ತೆರಳಿದ್ದ. ಈತನ ಚಲನವಲನ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಮಾರನೇ ದಿನ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಐ ಕಾಲೋನಿ ಬಳಿ ಶವವಾಗಿ ಸಂಜಯ್ ಪತ್ತೆಯಾಗಿದ್ದ. ಈ ಬೆಳವಣಿಗೆ ಕಂಡು ಪೊಲೀಸರೇ ಲಾಕಪ್ ಡೆತ್ ಮಾಡಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಮತ್ತೊಂದೆಡೆ ಸೆ.24 ರಂದು ಅಪರಿತನ ಶವ ಪತ್ತೆ ಹಿನ್ನೆಲೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸಿದಾಗ ಮೃತನ ವಿವರ ಕಲೆ ಹಾಕಿದ್ದಾರೆ.