ಬೆಂಗಳೂರು:ಅನ್ಯಾಯದ ವಿರುದ್ಧ ಹೋರಾಡಬೇಕಿದ್ದ, ನ್ಯಾಯಪರ ಕೆಲಸ ಮಾಡಬೇಕಾದ ಪೊಲೀಸ್ ಹಾಗೂ ಪತ್ರಕರ್ತರೇ ಇಲ್ಲಿ ವಂಚಕರಾಗಿದ್ದಾರೆ. ಅಳಿಯ ಮಾವ ಸೇರಿಕೊಂಡು ಸಿನಿಮೀಯ ಶೈಲಿಯಲ್ಲಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ.
ಕಾರಿನಲ್ಲಿ ಬೆಂಗಳೂರು ನಗರದಿಂದ ತುಮಕೂರಿಗೆ ಹೋಗುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ 26.5 ಲಕ್ಷ ರೂಪಾಯಿ ದೋಚಿದ್ದ ಎಸ್.ಜೆ.ಪಾರ್ಕ್ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್ ಹಾಗೂ ಪತ್ರಕರ್ತ ಜ್ಞಾನ ಪ್ರಕಾಶ್ ಹಾಗೂ ಕಿಶೋರ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಗುಬ್ಬಿ ಮೂಲದ ಮೋಹನ್ ಎಂಬುವವರು ತಮ್ಮ ಬಳಿ ಕೆಲಸ ಮಾಡುತ್ತಿದ್ದ ಶಿವಕುಮಾರಸ್ವಾಮಿಗೆ ಉಪ್ಪಾರಪೇಟೆಯ ಕುಂಬಾರಪೇಟೆಗೆ ಹೋಗಿ ಭರತ್ ಎಂಬುವರ ಬಳಿ 26.5 ಲಕ್ಷ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಇದರಂತೆ ಇದೇ ತಿಂಗಳು 19 ರಂದು ಭರತ್ ಎಂಬುವರ ಬಳಿಯಿಂದ ಹಣ ತೆಗೆದುಕೊಂಡು ಶಿವಕುಮಾರಸ್ವಾಮಿ ಕಾರಿನಲ್ಲಿ ಇಟ್ಟುಕೊಂಡಿದ್ದಾರೆ. ಹಣ ತೆಗೆದುಕೊಂಡಿರುವುದಾಗಿ ಮಾಲೀಕನಿಗೆ ಫೋನ್ ಮಾಡಿ ಹೇಳಿದಾಗ ಇನ್ನೂ ಎರಡು ಲಕ್ಷ ಹಣ ಬರಬೇಕಿದೆ ಅಲ್ಲೇ ಕಾಯಿರಿ ಎಂದು ಮೋಹನ್ ಹೇಳಿದ್ದಾರೆ.
ಇದರಂತೆ ಶಿವಕುಮಾರಸ್ವಾಮಿ ಚಿಕ್ಕಪೇಟೆಯ ಮೆಟ್ರೋ ನಿಲ್ದಾಣದ ಬಳಿ ಇರುವಾಗ ಜೀವನ್ ಕುಮಾರ್ ಹಾಗೂ ಜ್ಞಾನಪ್ರಕಾಶ್, ಶಿವಕುಮಾರಸ್ವಾಮಿಗೆ ಹೊಡೆದು ಬೇರೊಂದು ಕಾರಿನಲ್ಲಿ ಹತ್ತಿಸಿಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ. ಯುಟಿಲಿಟಿ ಬಿಲ್ಡಿಂಗ್ ಬಳಿ ಕರೆದುಕೊಂಡು ಹೋಗಿ ಹಣ ಕಸಿದುಕೊಂಡು ಲಾಲ್ ಬಾಗ್ ಬಳಿ ಬಿಟ್ಟು ಹೋಗಿದ್ದರು. ಘಟನೆ ಸಂಬಂಧ ನೀಡಿದ ದೂರಿನನ್ವಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.