ಬೆಂಗಳೂರು :ಶತಮಾನಗಳಿಂದಲೂ ಸಾಮಾಜಿಕ ಪಿಡುಗಾಗಿರುವ ಮಾದಕ ವ್ಯಸನ ಹಾಗೂ ಬಾಲ್ಯ ವಿವಾಹ ಪದ್ದತಿ ನಿರ್ಮೂಲನೆಗಾಗಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಈ ಪಿಡುಗು ತಡೆಗಟ್ಟಲು ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹೊಸ ಕಾರ್ಯಕ್ಕೆ ಮುಂದಾಗಿವೆ.
ಬಾಲ್ಯ ವಿವಾಹ ತಡೆ ಹಾಗೂ ಮಾದಕ ವ್ಯಸನಿ ನಿಯಂತ್ರಣ ಅರಿವು ಕಾರ್ಯಕ್ರಮ ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರೊಂದಿಗೆ ಸೇರಿ ಬಾಲ್ಯ ವಿವಾಹ ಹಾಗೂ ಮಾದಕ ವ್ಯಸನ ನಿಯಂತ್ರಣ ಬಗ್ಗೆ ಅರಿವು ಕಾರ್ಯಗಾರ ನಡೆಸಿದ್ದಾರೆ.
ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿ ಹೋಟೆಲ್ ಒಂದರಲ್ಲಿ ಕಾರ್ಯಗಾರ ಆಯೋಜಿಸಿ ಮದ್ಯ ವ್ಯಸನ ಹಾಗೂ ಬಾಲ್ಯ ವಿವಾಹ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಗಾರದಲ್ಲಿ ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರ, ಮಹದೇವಪುರ, ವರ್ತೂರು ಪೋಲೀಸ್ ಠಾಣೆಗಳ ವ್ಯಾಪ್ತಿಯ ಆಶಾ ಕಾರ್ಯಕರ್ತರು ಭಾಗವಹಿಸಿದ್ದು ಬಾಲ್ಯವಿವಾಹದಿಂದ ಮಹಿಳೆ ಗರ್ಭವತಿಯಾದಾಗ ಹಾಗೂ ಮಾದಕ ವ್ಯಸನದಿಂದ ಆಕೆಗೆ ಹುಟ್ಟುವ ಮಗುವಿನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಈ ಸಮಸ್ಯೆಯನ್ನು ನಿಯಂತ್ರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇನ್ನು ಪೊಲೀಸರ ಮಾಹಿತಿ ಪ್ರಕಾರ ಇಂದಿನ ಆಧುನಿಕ ಯುಗದಲ್ಲೂ ಕೆಲವೊಂದು ಸಮುದಾಯದವರು 18 ವರ್ಷಕ್ಕಿಂತ ಮುಂಚಿತವಾಗಿಯೇ ಹೆಣ್ಣುಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ. ಅಂತಹ ಪೋಷಕರು, ಪುರೋಹಿತರ ಜೊತೆಗೆ ಮದುವೆಗೆ ಬರುವ ಸಾರ್ವಜನಿಕರ ಮೇಲೂ ಪೋಕ್ಸೋ ಕಾಯ್ದೆ ದಾಖಲಿಸುವಂತೆ ಹೊಸ ಕಾಯ್ದೆ ಜಾರಿಗೊಳಿಸಿದ್ದು, ಇದು ಎಲ್ಲರಿಗೂ ತಿಳಿಸಬೇಕಾಗಿದೆ. ಈ ಉದ್ದೇಶದಿಂದಲೇ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರನ್ನು ಒಗ್ಗೂಡಿಸಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಎರಡೂ ಇಲಾಖೆ ಅಧಿಕಾರಿಗಳು ಕಾರ್ಯಗಾರದ ಉದ್ದೇಶವನ್ನ ಸ್ಪಷ್ಟ ಪಡಿಸಿದರು.