ಬೆಂಗಳೂರು:ಶಾಲಾ ಕಾಲೇಜು, ಪಾರ್ಕ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ದಂಧೆ ನಡೆಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ತಡರಾತ್ರಿ 21 ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾದಕ ಸೇವನೆಯಲ್ಲಿ ತೊಡಗಿದ್ದ 18 ಆರೋಪಿಗಳು ಹಾಗೂ ಮಾರಾಟದಲ್ಲಿ ತೊಡಗಿದ್ದ ಮೂವರು ಸಹಿತ ಒಟ್ಟು 21 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 11 ಗ್ರಾಂ ಎಂಡಿಎಂಎ, 7 ಗ್ರಾಂ ಹೈಡ್ರಾ ಮಾಂಗೋ ಹಾಗೂ 2.5 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಇತ್ತೀಚಿಗಷ್ಟೇ ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕವಾದ ಅಲೋಕ್ ಮೋಹನ್ ನಗರದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರು ನಗರವನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಬೇಕಿದೆ ಎಂದಿದ್ದರು. ಡಿಜಿ ಹಾಗೂ ಐಜಿಪಿಯವರ ಖಡಕ್ ಸೂಚನೆಯ ಮೇರೆಗೆ ನಗರದ ಎಲ್ಲಾ ವಿಭಾಗಗಳ ಪೊಲೀಸರು ಅಲರ್ಟ್ ಆಗಿದ್ದು, ಶಾಲಾ ಕಾಲೇಜುಗಳ ಪುನರಾರಂಭಕ್ಕೂ ಮುನ್ನ ಮಾಧಕ ದಂಧೆಕೋರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ, ಪಿಜಿಗಳಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಬಂಧನ: ಕಾಲೇಜು ವಿದ್ಯಾರ್ಥಿಗಳು, ಪಿಜಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ 2ನೇ ಹಂತದ ಕಾವೇರಿನಗರದ ನಿವಾಸಿ ಫಜಾಯ್ ಪಾಷಾ ಅಲಿಯಾಸ್ ಪಿಲ್ಲು ಬಂಧಿತ ಆರೋಪಿ. ಬಂಧಿತನಿಂದ 10.50 ಲಕ್ಷ ರೂ. ಮೌಲ್ಯದ 15 ಕೆಜಿ ಮಾದಕ ವಸ್ತುವಾದ ಗಾಂಜಾ, 2 ಸಾವಿರ ನಗದು, ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿದೆ.
ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಸುಲಭವಾಗಿ ಹಣ ಸಂಪಾದಿಸಲು ಡ್ರಗ್ ಪೆಡ್ಲಿಂಗ್ಗೆ ಇಳಿದಿದ್ದನು. ಬೆಂಗಳೂರಿನ ಕಾಲೇಜು, ಪಿಜಿಗಳ ಬಳಿ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ಆರೋಪಿಯು ಗುಬ್ಬಲಾಳ ಬಳಿಯ ಖಾಲಿ ಜಾಗವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಬನಶಂಕರಿ, ಜಯನಗರ, ಕೋರಮಂಗಲ, ಕೆ.ಎಸ್. ಲೇಔಟ್ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ: ಆನೇಕಲ್‌ನಲ್ಲಿ ಇಬ್ಬರ ಬಂಧನ