ಬೆಂಗಳೂರು: ಕೊರೊನಾ ಅಟ್ಟಹಾಸವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆವರೆಗೆ ಈ ಕರ್ಫ್ಯೂ ಇರಲಿದೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದ್ದು, ರಾತ್ರಿ 9 ಗಂಟೆಯಿಂದ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. 9 ಗಂಟೆ ಹೊತ್ತಿಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆರಂಭಿಸಿದ್ರೆ ಹತ್ತು ಗಂಟೆಯಷ್ಟರಲ್ಲಿ ಮನೆಗೆ ಹೋಗೋದಕ್ಕೆ ಅಗುತ್ತೆ. ಹೀಗಾಗಿ 9 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದಕ್ಕೆ ಸೂಚನೆ ನೀಡಲಾಗಿದೆ. ರಾತ್ರಿ 10ರ ನಂತರ ಯಾವುದೇ ಕಾರಣಕ್ಕೂ ಹೊರಗೆ ಬರುವಂತಿಲ್ಲ. ಆಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಪಾಸ್ ಸರ್ವೀಸ್ ಯಾರಿಗೂ ಇಲ್ಲ. ಯಾರು ಕೂಡ ಅನವಶ್ಯಕವಾಗಿ ಓಡಾಟ ನಡೆಸುವಂತಿಲ್ಲ ಎಂದರು.
ಒಂದು ವೇಳೆ ಯಾರಾದರೂ ಅನಗತ್ಯವಾಗಿ ಓಡಾಡುವುದು ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಯಾರೂ ಕೂಡ ಬೇಕಾಬಿಟ್ಟಿಯಾಗಿ ಓಡಾಡಬಾರದು. ನಮ್ಮ ಪೊಲೀಸರು ಬಂದೋಬಸ್ತ್ಗೆ ಸಿದ್ಧರಾಗಿದ್ದಾರೆ. ನಗರದ ಎಲ್ಲಾ ಫ್ಲೈ ಓವರ್ಗಳನ್ನು ಮುಚ್ಚಲಾಗುತ್ತದೆ. ತರಕಾರಿ, ಹಾಲು, ಪೇಪರ್, ತುರ್ತು ಸೇವೆ ವಾಹನಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ ಎಂದರು.