ಬೆಂಗಳೂರು: ಬೇರೆ ಬೇರೆ ಕ್ಷೇತ್ರದಲ್ಲಿನ ಜನರು ಸಾಹಿತ್ಯ ಸಂಗೀತ ಮತ್ತು ಲಲಿತ ಕಲೆಗಳ ಕಡೆಗೆ ಒಲವು ಬೆಳೆಸಿಕೊಳ್ಳುತ್ತಿರುವ ಕಾರಣ ಈ ಕ್ಷೇತ್ರಗಳಿಗೆ ಹೊಸ ಹುರುಪು ಹುಮ್ಮಸ್ಸು ಬರುತ್ತಿದೆ ಎಂದು ಕವಿ ಬಿ. ಆರ್ ಲಕ್ಷ್ಮಣ್ ರಾವ್ ಹೇಳಿದರು.
ಬಸವನಗುಡಿಯ ನ್ಯಾಷನಲ್ ಕಾಲೇಜಿನ ಹೆಚ್.ಎನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಶೈಲೇಶ್ ಪಟವರ್ಧನ್ ಅವರ ಚೊಚ್ಚಲ ಕವನ ಸಂಕಲನ 'ಖುಷಿ ಪಡಲು ಕಾರಣ' ಲೋಕಾರ್ಪಣೆಗೊಳಿಸಿ ಬಿ ಆರ್ ಲಕ್ಷ್ಮಣ್ ರಾವ್ ಮಾತನಾಡಿದರು. ಧ್ವನಿ ಸುರಳಿ, ಸಾಂದ್ರಿಕೆಗಳ ಕಾಲ ಮುಗಿದಿರುವ ಈ ಸಮಯದಲ್ಲಿ ಬೇರೆ ಕ್ಷೇತ್ರದ ಜನರು ಈ ವಲಯಕ್ಕೆ ಬಂದಾಗ ಹೊಸ ಅನುಭವ ಕೂಡ ಕಲೆಗಳಿಗೆ ಬರುತ್ತದೆ. ಆಲ್ಬಮ್ ಮಾಡಿ ಹಲವು ಸಾಮಾಜಿಕ ಜಾಲತಾಣ ಮತ್ತು ಯುಟ್ಯೂಬ್ನಲ್ಲಿ ಬಿಡುಗಡೆ ಈಗ ಪ್ರಚಲಿತವಾಗಿದೆ ಎಂದು ಹೇಳಿದರು.
ವ್ಯಾಪಾರಿ ದೃಷ್ಟಿಯಲ್ಲಿ ಭಾವ ಗೀತೆಗಳು ಅಷ್ಟು ಲಾಭ ತಂದುಕೊಡದಿದ್ದರೂ ಸಂಗೀತ ನಿರ್ದೇಶಕರು, ಕವಿಗಳು ಹೊಸ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಹಾಡುಗಳನ್ನು ಹೊರತರುತ್ತಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಶೈಲೇಶ್ ಪಟವರ್ಧನ್ ಅವರ ಕವನ ಸಂಕಲನ ಮತ್ತು ಧ್ವನಿ ಸುರಳಿ ಬಿಡುಗಡೆ ಜನರನ್ನು ಒತ್ತಡದ ಬದುಕಿನಿಂದ ಹೊರತರಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮಾಧಿಕಾರಿ ಎ.ಆರ್.ಗೋಪಾಲ್ ನಾಯಕ್ ಮಾತನಾಡಿ, ಇಂದಿನ ಸಮಾರಂಭ ಖುಷಿ ನೀಡಿದೆ. ಒಂದು ಕಾಲದಲ್ಲಿ ಕ್ಯಾಸೆಟ್ ಸಂಸ್ಕೃತಿಯಿಂದ ಭಾವ ಗೀತೆಗಳು, ಜಾನಪದ ಗೀತೆಗಳು ಕಿವಿಯಿಂದ ಕಿವಿಗೆ ತಲುಪುತ್ತಿತ್ತು. ಆ ಸಮಯ್ದಲ್ಲಿ ಹಲವು ಕವಿಗಳ ಸುಲಲಿತ ಕವಿತೆಗಳಿಂದ ಶ್ರವ್ಯಕ್ಕೆ ಬೆಲೆ ಬಂದಿತು. ಹೊಸ ಗಾಯಕರು ಸಂಗೀತ ನಿರ್ದೇಶಕರು ಹುಟ್ಟಿಕೊಂಡರು, ಭಾವ ಗೀತೆಗಳಿಗೆ ಆ ಕಾಲಘಟ್ಟದಲ್ಲಿ ಸಿಕ್ಕ ಕೊಡುಗೆ ಅಪಾರವಾಗಿತ್ತು. ಅದು ಇಂದಿನ ಕಾಲಘಟದಲ್ಲೂ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಲಿತದಲ್ಲಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ವ್ಯಾಖ್ಯಾನಿಸಿದರು.