ಬೆಂಗಳೂರು:ಟಿಕೆಟ್ ವಂಚಿತರಿಂದ ಪಕ್ಷಾಂತರ ಪರ್ವ ಮುಂದುವರೆದಿದ್ದು, ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹಾಗೂ ದಾಸರಹಳ್ಳಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪಿ.ಎನ್ ಕೃಷ್ಣಮೂರ್ತಿ ಹಾಗು ಕೊರಟಗೆರೆ ಕಾಂಗ್ರೆಸ್ ಮುಖಂಡರು ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಳೆದ ಸಲ ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆಗಿದ್ದ ಕೃಷ್ಣಮೂರ್ತಿ ಸಚಿವ ಮುನಿರತ್ನ, ಸಚಿವ ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಸೇರ್ಪಡೆಯಾದರು. ಕೊರಟಗೆರೆ ಕ್ಷೇತ್ರದ ಮಾಜಿ ಜಿ.ಪಂ ಸದಸ್ಯೆ ಸಿ ವಿ ರಂಗಮ್ಮ, ಮಾಜಿ ಸದಸ್ಯ ಮಧು ಕೂಡ ಬಿಜೆಪಿ ಸೇರ್ಪಡೆಯಾದರು. ಕೊರಟಗೆರೆ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ನೇತೃತ್ವದಲ್ಲಿ ಈ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದು, ಬಿಜೆಪಿ ಮುಖಂಡರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ ನಾರಾಯಣ್ ಮಾತನಾಡಿ, ಇಂದು ಕಾಂಗ್ರೆಸ್ನ ಹಿರಿಯ ನಾಯಕ ಕೃಷ್ಣಮೂರ್ತಿ ಮತ್ತು ಅವರ ಜೊತೆ ಮುನಿರತ್ನ ನಾಯಕತ್ವದಲ್ಲಿ ಬಿಜೆಪಿ ಸೇರಿದ್ದಾರೆ. ಕೃಷ್ಣಮೂರ್ತಿ ಅವರ ಜೊತೆ ಬಂದವರಿಗೆ ಸ್ಚಾಗತ ಕೋರುತ್ತೇನೆ. ಕೊರಟಗೆರೆ ಕ್ಷೇತ್ರ ಅಭ್ಯರ್ಥಿ ಅನಿಲ್ ಕುಮಾರ್ ಐಎಎಸ್ ಅಭ್ಯರ್ಥಿ. ಕೊರಟಗೆರೆಯಲ್ಲಿ ಅನಿಲ್ ಕುಮಾರ್ ಗೆಲ್ಲಲಿದ್ದಾರೆ. ಇಂದು ಪಕ್ಷ ಸೇರ್ಪಡೆಯಾದವರಿಂದ ಮೂರು ಕಡೆ ಗೆಲ್ಲಲು ಅನುಕೂಲ ಆಗಲಿದೆ ಎಂದರು.
ನಂತರ ಮಾತನಾಡಿದ ಕೃಷ್ಣಮೂರ್ತಿ, ಬಿಜೆಪಿಯಲ್ಲಿ ಒಗ್ಗಟ್ಟಿದೆ, ನಾಯಕತ್ವ ಇದೆ. ಅಶ್ವತ್ಥ ನಾರಾಯಣ್ ಹಾಗೂ ಮುನಿರತ್ನ ಅವರ ಸಮ್ಮುಖದಲ್ಲಿ ಸೇರ್ಪಡೆ ಆಗಿದ್ದೇವೆ. ಅನಿಲ್ ಕುಮಾರ್ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಬಿಜೆಪಿ ಸೇರ್ಪಡೆ ಆಗಿದ್ದೇನೆ. 2013ರಲ್ಲಿ ಡಿಕೆ ಶಿವಕುಮಾರ್ ಅವರು ಕನಕಪುರದ ಬಂಡೆ ಅಂತೆಲ್ಲ ಹೇಳಿದ್ದೀರಿ. ನಿಜವಾಗಿ ಹೇಳಬೇಕೆಂದರೆ ಅವರು ಒಕ್ಕಲಿಗ ವಿರೋಧಿ. 2013ರಿಂದ ಸತತವಾಗಿ ಕೆಲಸ ಮಾಡಿಕೊಂಡು ಬಂದರೂ ಟಿಕೆಟ್ ನೀಡಲಿಲ್ಲ.